ಮೈಸೂರು: ದಸರಾ ಉದ್ಘಾಟಕರ ಬಗ್ಗೆ ಬಿಜೆಪಿಯವರು ವಿರೋಧದ ಧ್ವನಿಯೆತ್ತಿದ್ದರು. ಕರ್ನಾಟಕ ಜಾತ್ಯಾತೀತ ರಾಜ್ಯವಾಗಿದ್ದು, ಸಂವಿಧಾನದ ಬಗ್ಗೆ ಅರಿವಿಲ್ಲದವರೇ ಇಂತಹ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅವರಿಗೆ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿತು. ದಸರಾ ರಾಜಕೀಯದ ವಿಷಯವಲ್ಲ, ಇದು ಸಾಂಸ್ಕೃತಿಕ ಉತ್ಸವ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ, ಮೈಸೂರು ದಸರಾಕ್ಕೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ. ದಸರಾದಲ್ಲಿ ಏರ್ ಶೋ, ದೀಪಾಲಂಕಾರ, ಡ್ರೋನ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜನಪ್ರಿಯವಾಗಿದೆ. ಜನರು ಸಂತಸದಿಂದ ಪಾಲ್ಗೊಳ್ಳುವುದೇ ದಸರಾ ಉತ್ಸವ. ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ, ವಸ್ತು ಪ್ರದರ್ಶನ ಪ್ರಾಧಿಕಾರ ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ದಸರಾ ಪ್ರಾಧಿಕಾರದ ಅವಶ್ಯಕತೆ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ವರ್ಷಕ್ಕೊಮ್ಮೆ ನಡೆಯುವ ದಸರಾ ಉತ್ಸವದಲ್ಲಿ ಸಾರ್ವಜನಿಕರು, ವ್ಯಾಪಾರಸ್ಥರು ಸಂಭ್ರಮದಿಂದ ಭಾಗವಹಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ದಸರಾ ವೇಳೆ ಮುಂದಿನ ದಸರಾದಲ್ಲಿ ನಾನು ಪುಷ್ಪಾರ್ಚನೆ ಮಾಡುವುದಿಲ್ಲ ಎಂದು ವಿಪಕ್ಷ ನಾಯಕರು ಹೇಳಿದ್ದರು. ವಿರೋಧ ಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ. ಆದರೆ ನಮ್ಮ ಪಕ್ಷದ ವರಿಷ್ಠರ ಆದೇಶದಂತೆ ಎಲ್ಲರೂ ನಡೆಯಬೇಕಿದೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು, ಬಜೆಟ್ ಮಂಡಿಸಲು ಸಾಧ್ಯವಿಲ್ಲವೆಂದಿದ್ದರು. ಆದರೂ ನಾನೇ ಎರಡನೇ ಬಾರಿಗೂ ಮುಖ್ಯಮಂತ್ರಿಯಾಗಿ ಮುಂದುವರೆದು ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿದ್ದಾರೆ.