ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಪ್ರಹಾರ ಮುಂದುವರಿಸಿದ್ದಾರೆ. ಆಮದು ಸರಕು, ಔಷಧ ಉತ್ಪನ್ನಗಳ ಮೇಲೆ ಪ್ರತಿ ಸುಂಕ ಹೆಚ್ಚಳದ ನಂತರ ಮನರಂಜನಾ ಕ್ಷೇತ್ರ ಸಿನಿಮಾ ಮೇಲೂ ಸುಂಕ ಹೆಚ್ಚಿಸಲು ಮುಂದಾಗಿದ್ದಾರೆ.
ಅಮೆರಿಕದಿಂದ ಹೊರಗೆ ತಯಾರಾದ ಅಮೆರಿಕೇತರ ಸಿನಿಮಾಗಳ ಮೇಲಿನ ತೆರಿಗೆಯನ್ನು ಶೇಕಡ 100ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ನಮ್ಮ ದೇಶದಲ್ಲಿ ಬೇರೆ ದೇಶಗಳ ಚಲನಚಿತ್ರಗಳು ಲಾಭ ಮಾಡಿಕೊಳ್ಳುತ್ತಿವೆ. ಅಮೆರಿಕ ಚಿತ್ರೋದ್ಯಮದ ವ್ಯವಹಾರವನ್ನು ಬೇರೆ ದೇಶಗಳ ಉದ್ಯಮಗಳು ಮಗುವಿನ ಕೈಯಲ್ಲಿರುವ ಕ್ಯಾಂಡಿಯನ್ನು ಕದ್ದು ತಿನ್ನುವ ರೀತಿಯಲ್ಲಿ ಹೈಜಾಕ್ ಮಾಡುತ್ತಿವೆ. ನಮ್ಮ ದೇಶದ ಉದ್ಯಮ ಉಳಿಸುವ ಉದ್ದೇಶದಿಂದ ಅಮೆರಿಕದ ಹೊರಗೆ ತಯಾರಾಗುವ ಸಿನಿಮಾಗಳ ಮೇಲೆ ಶೇಕಡ 100 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.
ಸಿನಿಮಾಗಳಿಗೆ ಶೇ. 100ರಷ್ಟು ಸುಂಕ ಹೆಚ್ಚಳದಿಂದ ಸಿನಿಮಾ ಟಿಕೆಟ್ ದರ, ಹಂಚಿಕೆ ವೆಚ್ಚ ದುಪ್ಪಟ್ಟಾಗಲಿದ್ದು, ಅಮೆರಿಕದಲ್ಲಿ ದೊಡ್ಡ ಮಾರುಕಟ್ಟೆ ಹೊಂದಿರುವ ಭಾರತೀಯ ಸಿನಿಮಾಗಳ ಬಿಡುಗಡೆ ಕಷ್ಟ ಸಾಧ್ಯವಾಗುತ್ತದೆ.