ಆನೇಕಲ್: ಮಹಿಳೆಯೊಬ್ಬರ ಮೇಲೆ ಗಂಡನ ಮನೆಯವರೇ ಮೃಗೀಯ ವರ್ತನೆ ತೋರಿರುವ ಅಮಾನವೀಯ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಆನೇಕಲ್ ನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಪತಿ, ಅತ್ತೆ-ಮಾವ ಸೇರಿ ಮಹಿಳೆಯನ್ನು ಮನಬಂದಂತೆ ಥಳಿಸಿ, ರಸ್ತೆಗೆ ಎಳೆದು ತಂದು ಕಾಲಿನಿಂದ ಒದ್ದು, ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಮನೆಯವರ ಕ್ರೌರ್ಯ, ರಕ್ಕಸತನ ವರ್ತನೆಗೆ ನಲುಗಿರುವ ಮಹಿಳೆ ತನ್ನನ್ನು ಬಿಟ್ಟುಬಿಡಿ ಹೊಡೆಯಬೇಡಿ ಎಂದು ಬೇಡಿಕೊಂಡಿದ್ದಾರೆ. ಆದರೂ ಕರುಣೆ ತೋರದ ರಾಕ್ಷಸರು ಮೃಗೀಯವಾಗಿ ವರ್ಥಿಸಿ, ಅಟ್ಟಹಾಸ ಮೆರೆದಿದ್ದಾರೆ. ಶ್ರೀಲಜಾ (32) ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಹಿಳೆ.
ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ ಹಾಗೂ ಮಾವ ಚೌಡಪ್ಪ ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ಕ್ರೌರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರುಣ್ ಕುಮಾರ್ ಹಾಗೂ ಶ್ರೀಲಜಾ ದಂಪತಿಗೆ 4 ವರ್ಷದ ಮಗಳಿದ್ದಾಳೆ. ಮದುವೆಯಾದ ದಿನದಿಂದಲೂ ಪತಿ ಅರುಣ್ ಕುಮಾರ್ ಹಾಗೂ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಹಿಂಸೆಗೆ ನೊಂದು ಶ್ರೀಲಜಾ ಕೆಲ ದಿನಗಳ ಕಾಲ ತವರಿಗೆ ಹೋಗಿದ್ದಳು. ಬಳಿಕ ವಾಪಸ್ ಮನೆಗೆ ಬಂದಿದ್ದಳು. ಮನೆಗೆ ಬಂದ ಶ್ರೀಲಜಾ ಮೇಲೆ ಹಲ್ಲೆ ನಡೆಸಿದ ಪತಿ, ಅತ್ತೆ-ಮಾವ ಮನೆಯಿಂದ ಆಕೆಯನ್ನು ಹೊರಗೆಳೆದು ತಂದು ರಸ್ತೆಯಲ್ಲಿ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ.
ಹಾಡಹಗಲೇ ಮಹಿಳೆಯನ್ನು ಮನೆಯಿಂದ ಎಳೆದುತಂದು ಮಾರಣಾಂತಿಕ ಹಲ್ಲೆ ನಡೆಸಿರುವ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.