BIG NEWS: ಮಹಾಮಳೆಯಿಂದ ಪ್ರವಾಹ: ಸಂಕಷ್ಟಕ್ಕೀಡಾದ ಜನತೆ: ನಾಳೆ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

ಬೀದರ್: ಬೀದರ್ ನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದ ಬೆಳೆ, ಮನೆ ಹಾನಿಯ ಜೊತೆಗೆ ಮೂಲಸೌಕರ್ಯಕ್ಕೂ ಹಾನಿ ಆಗಿದ್ದು, ವೈಮಾನಿಕ ಸಮೀಕ್ಷೆ ನಡೆಸಿ, ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸಚಿವ ಈಶ್ವರ ಖಂಡ್ರೆ ಮಾತನಾಡಿದ್ದು, ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ವೈಮಾನಿಕ ಸಮೀಕ್ಷೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಋತುಮಾನಗಳಲ್ಲಿ ಏರುಪೇರಾಗುತ್ತಿದ್ದು, ಇದರ ಪರಿಣಾಮ ಗಡಿ ಜಿಲ್ಲೆ ಬೀದರ್ ಮೇಲೂ ಆಗುತ್ತಿದೆ. ಹೆಚ್ಚಿನ ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಇಲ್ಲದ ನಮ್ಮ ಜಿಲ್ಲೆಯ ಶೇ.75ರಷ್ಟು ಜನರ ಬದುಕು ಕೃಷಿಯನ್ನೇ ಅವಲಂಬಿಸಿದ್ದು, ಈ ವರ್ಷ 4.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಆದರೆ, ಆಗಸ್ಟ್ ತಿಂಗಳಲ್ಲೇ ಸುರಿದ ಅನಿರೀಕ್ಷಿತ ಪ್ರಮಾಣದ ಮಳೆಯಿಂದ ಶೇ.25ರಷ್ಟು ಬೆಳೆ ನಷ್ಟವಾಗಿತ್ತು. ಈಗ ಸೆಪ್ಟೆಂಬರ್ ನಲ್ಲಿ ಮತ್ತೆ ವಿಪರೀತ ಮಳೆ ಸುರಿಯುತ್ತಿದ್ದು, ರಾಶಿಗೆ ಬಂದ ಹೆಸರು, ಉದ್ದು, ತೊಗರಿ, ಸೋಯಾ ಸೇರಿದಂತೆ ಎಲ್ಲ ಬೆಳೆ ಸಂಪೂರ್ಣ ಹಾನಿಯಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಹಿತಿ ನೀಡಿದರು.

ಒಂದು ವಾರದ ಅವಧಿಯಲ್ಲಿ ಒಂದು ತಿಂಗಳ ಮಳೆ ಬೀಳುತ್ತಿರುವ ಪರಿಣಾಮ, ಹಲವು ಸೇತುವೆಗಳು ಕುಸಿದು ಸಂಪರ್ಕ ಕಡಿತವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ ಅನೇಕ ಗ್ರಾಮಗಳು ವಿದ್ಯುತ್ ಇಲ್ಲದೆ ಅಂಧಕಾರದಲ್ಲಿ ಮುಳುಗಿವೆ. ಭಾರೀ ಮಳೆಗೆ ಶಾಲಾ ಕೊಠಡಿ, ಅಂಗನವಾಡಿ ಕಟ್ಟಡ, ಆಸ್ಪತ್ರೆ, ಸರ್ಕಾರಿ ಕಚೇರಿಗಳೂ ಸೋರುವಂತಾಗಿದೆ. ಪ್ರವಾಹದಿಂದಾಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು, ಭೂಮಿ ಸವಳು ಜವಳಾಗಿದೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ತಾವು, ಬೀದರ್ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ತುರ್ತು ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ವಿನಂತಿ ಮಾಡಿದ್ದಾಗಿ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಸೆಪ್ಟೆಂಬರ್ 30ರಂದು ಸಿಎಂ ಸಿದ್ದರಾಮಯ್ಯ ಬೀದರ್ ನಲ್ಲಿ ಮಳೆಹಾನಿ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read