ಕೋಲಾರ: ಕೋಲಾರ ನಗರ ಹೊರವಲಯದಲ್ಲಿರುವ ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೈವಾಕ್ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ-75ಲ್ಲಿ ತಡರಾತ್ರಿ ಸ್ಕೈವಾಕ್ ತುಂಡಾಗಿ ಬಿದ್ದಿದೆ. ಇದರಿಂದಾಗಿ 3 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ದಟ್ಟಣೆಯುಂಟಾಯಿತು. ಕೊಂಡರಾಜನಹಳ್ಳಿ ಆಂಜನೇಯ ದೇಗುಲದ ಬಳಿ ಜಾರ್ಖಂಡ್ ರಾಜ್ಯದ ಟ್ರಕ್ ಗುದ್ದಿ ಸ್ಕೈವಾಕ್ ಮಧ್ಯದಲ್ಲಿ ತುಂಡಾಗಿದೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸ್ಕೈವಾಕ್ ಟ್ರಕ್ ಮೇಲೆಯೇ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಕೈವಾಕ್ ತೆರವು ಕಾರ್ಯ ನಡೆಯುತ್ತಿದ್ದು, ಆಂಧ್ರಪ್ರದೇಶ, ಬೆಂಗಳೂರು, ತಮಿಳುನಾಡಿಗೆ ತೆರಳುವ ಪ್ರಯಾಣಿಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿದೆ.