ಕೊಪ್ಪಳ: ಗಂಗಾವತಿ ನಗರದ ಶಾದಿಮಹಲ್ ನಲ್ಲಿ ನಕಲಿ ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ತಲಾ 2 ವರ್ಷಗಳ ಸೆರೆಮನೆ ವಾಸದ ಶಿಕ್ಷೆಯೊಂದಿಗೆ ರೂ.24,000 ದಂಡವನ್ನು ವಿಧಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ ಪಾಟೀಲ ಅವರು ಸೆಪ್ಟೆಂಬರ್ 22 ರಂದು ತೀರ್ಪು ಪ್ರಕಟಿಸಿದ್ದಾರೆ.
ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2017 ರ ಏಪ್ರಿಲ್ 2 ರಂದು ಮುಂಜಾನೆ 11 ರಿಂದ 11.30 ಗಂಟೆಯ ಅವಧಿಯಲ್ಲಿ ಗಂಗಾವತಿಯ ಲಕ್ಷ್ಮೀ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಅಪ್ರಾಪ್ತ ಬಾಲಕಿಗೆ 18 ವರ್ಷ ಪೂರ್ಣಗೊಂಡಿವೆ ಎಂದು ನೀಡಿದ ಖೊಟ್ಟಿ ವರ್ಗಾವಣೆ ಪ್ರಮಾಣ ಪತ್ರ ನೀಡಿ ಆರೋಪಿತರಾದ ಎ-1 ಮಕ್ಬಲ್ ಖಾದ್ರಿ ಹಾಗೂ ಎ-2 ಕುಸುಂಬಿ ಎಂಬುವವರು ತಮ್ಮ ಅಪ್ರಾಪ್ತ ಮಗಳಾದ ಆಶಾಳ ಮದುವೆಯನ್ನು ಎ-3 ಸೈಯದ್ ಖಾಜಾಪಾಷಾ ಎಂಬ ವ್ಯಕ್ತಿಯೊಂದಿಗೆ ಎ-4 ಸೈಯದ್ ಮೈನುದ್ದೀನ್ ಖಾದ್ರಿ ಮತ್ತು ಎ-5 ಖಾತುಬೀ ಅವರು ಗಂಗಾವತಿ ನಗರದ ಶಾದಿಮಹಲ್‌ನಲ್ಲಿ ಮದುವೆ ಮಾಡಲು ನಿಶ್ಚಯಿಸಿದ್ದರು.
ಈ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 10, 11 ಮತ್ತು ಐಪಿಸಿ ಕಲಂ 465 ಹಾಗೂ ಐಪಿಸಿ ಕಲಂ 471 ರಡಿ ಪ್ರಕರಣ ದಾಖಲಾಗಿತ್ತು.
ಆಗಿನ ತನಿಖಾಧಿಕಾರಿಯಾಗಿದ್ದ ಗುಲಾಮ್ ಅಹ್ಮದ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ನಿರ್ಣಯಿಸಿ ಅಪರಾಧಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 10 ಅಪರಾಧಕ್ಕೆ 2 ವರ್ಷಗಳ ಸೆರೆಮನೆ ವಾಸದ ಶಿಕ್ಷೆ ಹಾಗೂ ತಲಾ ರೂ.10 ಸಾವಿರಗಳ ಜುಲ್ಮಾನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 11 ಅಪರಾಧಕ್ಕೆ 2 ವರ್ಷಗಳ ಸೆರೆಮನೆ ವಾಸದ ಶಿಕ್ಷೆ ಹಾಗೂ ತಲಾ ರೂ.10 ಸಾವಿರಗಳ ಜುಲ್ಮಾನೆ, ಭಾರತೀಯ ದಂಡ ಸಂಹಿತೆ ಕಲಂ 465 ಅಪರಾಧಕ್ಕೆ 6 ತಿಂಗಳು ಸೆರೆವಾಸ ಹಾಗೂ ರೂ.2,000/- ಗಳ ಜುಲ್ಮಾನೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 471 ಅಪರಾಧಕ್ಕೆ 6 ತಿಂಗಳು ಸೆರೆವಾಸ ಮತ್ತು ರೂ.2,000 ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರಂಜನ ಸ್ವಾಮಿ ದೇವಯ್ಯ ಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಹೆಚ್.ಸಿ. ಸುಭಾಷ್, ಪಿಸಿ-294 ಯಮನೂರಪ್ಪ, ಪಿಸಿ-97 ಭೀಮಣ್ಣ, ಪಿಸಿ-601 ಯಲ್ಲರೆಡ್ಡಿ ಅವರು ವಿಚಾರಣೆ ಸಂದರ್ಭ ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸಿ, ಸಹಕರಿಸಿದ್ದಾರೆ ಎಂದು ಗಂಗಾವತಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.