ಬೆಂಗಳೂರು: ಹೈಟೆನ್ಷನ್ ತಂತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಗಾಳಿಪಟ ತೆಗೆಯಲು ಯತ್ನಿಸಿದ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿನಾಯಕ ನಗರ ನಿವಾಸಿಗಳಾದ ಸೈಯದ್ ಮೊಹಿದ್ದೀನ್(10), ಮೊಹಮ್ಮದ್ ತೌಸಿಫ್(9) ಗಾಯಗೊಂಡ ಬಾಲಕರು. ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಇಬ್ಬರು ಬಾಲಕರು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.
ಬಾಲಕರು ಸಾರಾಯಿ ಪಾಳ್ಯದಲ್ಲಿ ಗಾಳಿಪಟ ಹಾರಿಸುವಾಗ ಅವಘಡಕ್ಕೆ ಸಿಲುಕಿದ್ದಾರೆ. ಖಾಸಗಿ ಶಾಲೆಯಲ್ಲಿ ಸೈಯದ್ ಮೊಹಿದ್ದೀನ್ ಐದನೇ ತರಗತಿ ಓದುತ್ತಿದ್ದು, ತೌಸಿಫ್ 4ನೇ ತರಗತಿ ಓದುತ್ತಿದ್ದಾನೆ. ದಸರಾ ರಜೆ ಹಿನ್ನೆಲೆಯಲ್ಲಿ ಮನೆಯ ಬಳಿ ಗೆಳೆಯರೊಂದಿಗೆ ಗಾಳಿಪಟ ಹಾರಿಸುತ್ತಿದ್ದರು.
ಗಾಳಿಪಟ ಹಾರಿ ಹೋಗಿ ಹೈಟೆನ್ಷನ್ ವಿದ್ಯುತ್ ತಂತಿಗೆ ಸಿಲುಕಿದೆ. ಅದನ್ನು ತೆಗೆಯಲು ಮನೆಗೆ ಹೋಗಿ ಪರದೆ ಹಾಕುವ ಕಬ್ಬಿಣದ ರೋಲ್ ತಂದು ಮೂರು ಅಂತಸ್ತಿನ ಕಟ್ಟಡದ ಮಹಡಿಗೆ ಹೋಗಿ ಅಲ್ಲಿಂದ ನಿಂತು ಗಾಳಿಪಟ ತೆಗೆಯಲು ಯತ್ನಿಸಿದ್ದಾರೆ. ಕಬ್ಬಿಣದ ರೋಲ್ ತಾಕಿದ ಕೂಡಲೇ ಹೈಟೆನ್ಷನ್ ತಂತಿಯಿಂದ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮಕ್ಕಳ ಚೀರಾಟ ಕೇಳಿದ ಸ್ಥಳೀಯರು ಧಾವಿಸಿ ಬಂದು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕರ ದೇಹವು ಶೇಕಡ 30ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.