BREAKING : ‘ಹಿಂದಿ ಹೇರಿಕೆ’ ವಿರೋಧಿಸಿ ಬೆಂಗಳೂರಲ್ಲಿ ಪ್ರತಿಭಟನೆ : ಬಂಧಿತ 41 ‘ಕರವೇ’ ಕಾರ್ಯಕರ್ತರಿಗೆ 14 ದಿನ ನ್ಯಾಯಾಂಗ ಬಂಧನ.!

ಬೆಂಗಳೂರು : ತಾಜ್ ವೆಸ್ಟೆಂಡ್ ಹೋಟೆಲ್ ಗೆ ನುಗ್ಗಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 41 ಮಂದಿ ಕರವೇ ಕಾರ್ಯಕರ್ತರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹಿಂದಿಹೇರಿಕೆ ಮಾಡುವ ಸಂಬಂಧ ನಡೆಸುತ್ತಿದ್ದ ಕಾರ್ಯಕ್ರಮದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆಯರು ನುಗ್ಗಿ ಪ್ರತಿಭಟನೆ ನಡೆಸಿದ್ದರು.ಈ ವೇಳೆ ಏಕಾಏಕಿ ಕಾರ್ಯಕ್ರಮಕ್ಕೆ ಕಾರ್ಯಕರ್ತೆಯರು. ಪ್ರತಿಭಟನೆ ನಡೆಸಿದ್ದಾರೆ.

ಕರವೇ ನಾರಾಯಣ ಗೌಡ ಆಕ್ರೋಶ

ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮೂರು ದಿನಗಳಿಂದ ಕನ್ನಡಿಗರೂ ಸೇರಿದಂತೆ ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹಿಂದಿಹೇರಿಕೆ ಮಾಡುವ ಸಂಬಂಧ ನಡೆಸುತ್ತಿದ್ದ ಕಾರ್ಯಕ್ರಮದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ನಮ್ಮ ನಲವತ್ತಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಬಂಧಿಸಲಾಗಿದೆ. ಘಟನೆ ನಡೆದ ನಂತರ ಇಡೀ ಪ್ರಕರಣವನ್ನು ತಿರುಚುವ ಯತ್ನಗಳು ನಡೆಯುತ್ತಿವೆ. ಈ ಕಾರ್ಯಕ್ರಮ ಹಿಂದಿ ಹೇರಿಕೆಯ ಕಾರ್ಯಕ್ರಮ ಅಲ್ಲ, ಅದು ಹಿಂದಿ ಭಾಷೆಗೆ ಸಂಬಂಧಿಸಿದ್ದೇ ಅಲ್ಲ ಎಂದು ತಿರುಚಲಾಗುತ್ತಿದೆ.

ಕೇಂದ್ರ ಸರ್ಕಾರದ ರಾಜಭಾಷಾ ಸಮಿತಿ ಇರುವುದೇ ಹಿಂದಿ ಪ್ರಚಾರಕ್ಕೆ ಮತ್ತು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದಕ್ಕೆ. ಹಿಂದಿ ಸಾಮ್ರಾಜ್ಯಶಾಹಿಯನ್ನು ಸ್ಥಾಪಿಸುವ ಸಲುವಾಗಿಯೇ ಈ ರಾಜಭಾಷಾ ಸಮಿತಿ ಕೆಲಸ ಮಾಡುತ್ತಿದೆ. ಯಾರಿಗಾದರೂ ಅನುಮಾನವಿದ್ದರೆ ರಾಜಭಾಷಾ ಸಮಿತಿ ಇದುವರೆಗೆ ಏನು ಕೆಲಸ ಮಾಡಿದೆ ಎಂಬುದನ್ನು ಗಮನಿಸಬಹುದು. ಭಾರತದಲ್ಲಿ ರಾಜಶಾಹಿ ವ್ಯವಸ್ಥೆ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿದ್ದು 1947ರಲ್ಲಿ. ಆದರೆ ರಾಜಭಾಷೆಯ ಹೆಸರಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ ಅಂದಿನಿಂದಲೂ ಜಾರಿಯಲ್ಲಿದೆ. ದೇಶದಲ್ಲಿ ಈಗ ರಾಜರೂ ಇಲ್ಲ, ರಾಜಭಾಷೆಗಳೂ ಇಲ್ಲ. ಇರುವುದು ಈ ನೆಲದ ಭಾಷೆಗಳು. ನಮಗೆ ನಮ್ಮ ಕನ್ನಡವೇ ರಾಷ್ಟ್ರಭಾಷೆ. ಇನ್ಯಾವುದೋ ಭಾಷೆಯನ್ನು ರಾಜಭಾಷೆ ಎಂದು ಹೇಳಿ ನಮ್ಮ ಮೇಲೆ ಹೇರಲು ಯತ್ನಿಸಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನ ನೀಡಲು ಯತ್ನಿಸಿ ಹಿಂದಿ ಸಾಮ್ರಾಜ್ಯಶಾಹಿಗಳು ವಿಫಲವಾಗಿದ್ದು ಇತಿಹಾಸ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಸುಳ್ಳು ಪ್ರಚಾರ ಮಾಡಲಾಯಿತು. ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಸುಳ್ಳು ಬಹಿರಂಗವಾದಮೇಲೆ ಈಗ ಅದನ್ನು ರಾಜಭಾಷೆ ಎಂದು ಮೆರೆಸಲಾಗುತ್ತಿದೆ. ಈ ಹುನ್ನಾರವನ್ನು ನಾವು ವಿಫಲಗೊಳಿಸದೇ ಬಿಡುವುದಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ಕೇಸಿಗೆ, ಜೈಲಿಗೆ ಬೆದರುವುದಿಲ್ಲ. ಆದರೆ ನಮ್ಮ ಮುಖಂಡರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, ಸಂಬಂಧಪಡದ ಸೆಕ್ಷನ್ ಗಳನ್ನು ಹೇರಿದರೆ ನಾವು ಸುಮ್ಮನಿರುವುದಿಲ್ಲ. ರಾಜ್ಯದ ಎಲ್ಲ ಭಾಗಗಳಿಂದ ನಮ್ಮ ಕಾರ್ಯಕರ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಏನಾದರೂ ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಹೊರಟರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲು ಬಯಸುತ್ತೇನೆ. ನಮ್ಮ ಪ್ರತಿಭಟನೆಗೆ ಸಂಬಂಧಪಟ್ಟಂತೆ ಹೈಗ್ರೌಂಡ್ಸ್ ಠಾಣೆಯ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ ಎಂಬ ಸುದ್ದಿಯನ್ನು ಕೇಳಿದೆ.

ಇದು ನಾಚಿಕೆಗೇಡಿತನ. ರಾಜಭಾಷಾ ಸಮಿತಿ ಕಾರ್ಯಕ್ರಮವನ್ನು ಪಂಚತಾರಾ ಹೋಟೆಲ್ ನಲ್ಲಿ ಕದ್ದುಮುಚ್ಚಿ ನಡೆಸಲಾಗುತ್ತಿತ್ತು. ಪೊಲೀಸರಿಗಾಗಲೇ, ಮಾಧ್ಯಮದವರಿಗಾಗಲೇ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ. ಹೀಗಿದ್ದಾಗ್ಯೂ ಕೂಡ ಇನ್ಸ್ ಪೆಕ್ಟರ್ ಅಮಾನತು ಮಾಡಿದ ಉದ್ದೇಶವೇನು? ಸರ್ಕಾರ ಈ ಕೂಡಲೇ ಈ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾವು ನಮ್ಮ ಪ್ರಾಣ ಒತ್ತೆಯಿಟ್ಟಾದರೂ ಈ ಕುತಂತ್ರವನ್ನು ಬಗ್ಗುಬಡಿಯುತ್ತೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು, ಇದು ನನ್ನ ಆಗ್ರಹ. ದೇಶದ ಐಕ್ಯತೆಗೆ ಧಕ್ಕೆ ತರುತ್ತಿರುವ ರಾಜಭಾಷಾ ಸಮಿತಿಯನ್ನು ರದ್ದುಪಡಿಸಬೇಕು. ಅದರ ಅಗತ್ಯ ದೇಶಕ್ಕೆ ಇಲ್ಲ ಎಂದು ನಾರಾಯಣ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read