ಬೆಂಗಳೂರು: ನಾಡ ಹಬ್ಬದ ದಸರಾ ಮಹೋತ್ಸವದ ಸಂಭ್ರಮದಲ್ಲಿ ಜೀವನದಿ ಕಾವೇರಿಗೆ ಆರತಿ ಬೆಳಗುವ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 26ರಂದು ಶುಕ್ರವಾರ ಕೆ.ಆರ್.ಎಸ್.ನಲ್ಲಿ ಚಾಲನೆ ನೀಡಲಾಗುವುದು.
ಸೆಪ್ಟಂಬರ್ 26ರಂದು ಕಾವೇರಿ ಆರತಿ ಚಾಲನೆ ಪಡೆದುಕೊಳ್ಳಲಿದ್ದು, 5 ದಿನಗಳ ಕಾಲ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ಕಾವೇರಿ ಆರತಿಗೆ ಚಾಲನೆ ನೀಡಲಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ, ಪಿ.ಎಂ. ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಕೆ.ಎನ್. ಉದಯ್, ದರ್ಶನ್ ಪುಟ್ಟಣ್ಣಯ್ಯ, ಮಧು ಮಾದೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
13 ಮಂದಿಯಿಂದ ಕಾವೇರಿ ಆರತಿ ನಡೆಯಲಿದ್ದು, ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟಾರೆ 40 ಮಂದಿ ಕಾವೇರಿ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದ ಮೂಲಕ ಪೂಜೆ, ಕಾವೇರಿ ಸ್ತೋತ್ರ, ಬಾಗಿನ ಅರ್ಪಿಸಲಾಗುವುದು. ಶಂಖನಾದ, ಧೂಪದ ಆರತಿ, ಚಾಮರ ಸೇವೆ ನಡೆಯಲಿದೆ. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಸಂಕಲ್ಪಗಳ ಕಾರ್ಯಕ್ರಮ ನಿಗದಿಯಾಗಿದೆ. ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜೆ ನೆರವೇರಲಿದೆ.