ಬೆಂಗಳೂರು : ‘ಶಿಕ್ಷಣ ಇಲಾಖೆ’ ಎಡವಟ್ಟು ಮಾಡಿದ್ದು, ಜಾತಿ ಗಣತಿ ಕಾರ್ಯಕ್ಕೆ ಗರ್ಭಿಣಿ, ಅಂಗವಿಕಲ, ಮೃತ ಶಿಕ್ಷಕರ ಹೆಸರು ಸೇರ್ಪಡೆ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ.
ಹೌದು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಅಂಗವಿಕಲರು, ಗರ್ಭಿಣಿಯರು, ಮೃತ ಶಿಕ್ಷಕರನ್ನು ಗಣತಿದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಬೆಳಗಾವಿ ಶಾಲಾ ಶಿಕ್ಷಕರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಅಂಗವಿಕಲರು, ಗರ್ಭಿಣಿಯರು, ಮೃತ ಶಿಕ್ಷಕರ ಹೆಸರು ಸೇರ್ಪಡೆ ಮಾಡಲಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಸಮೀಕ್ಷೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ತಂತ್ರಾಂಶ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಮನೆಗೆ ಹೋದರೆ ಜನರು ಕೂಡ ಸರಿಯಾದ ಸ್ಪಂದನೆ ವ್ಯಕ್ತಪಡಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಗಣತಿಯಲ್ಲಿ ಭಾಗಿಯಾಗುವುದು ಕಡ್ಡಾಯವಲ್ಲ ಎಂದು ಸರ್ಕಾರ ತಿಳಿಸಿದೆ. ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆಯಲ್ಲಿ ಜನರ ಭಾಗಿ ಸ್ವಯಂಪ್ರೇರಿತ. ಮಾಹಿತಿ ನೀಡಲು ನಿರಾಕರಿಸಬಹುದು ಎಂದು ಸರ್ಕಾರ, ಹಿಂದುಳಿದ ವರ್ಗಗಳ ಆಯೋಗ ಹೈಕೋರ್ಟ್ ಗೆ ಸ್ಪಷ್ಟಪಡಿಸಿವೆ. ಸಮೀಕ್ಷೆಗೆ ತಡೆ ಕೋರಿದ ಅರ್ಜಿ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಚಾರಣೆಯನ್ನು ಮುಂದೂಡಲಾಗಿದೆ.