ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಯ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಮಧ್ಯರಾತ್ರಿ 12ರಿಂದ ಸೆಪ್ಟೆಂಬರ್ 25ರ ಬೆಳಿಗ್ಗೆ 6 ಗಂಟೆಯವರೆಗೆ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಮಹಿಷ ಮಂಡಲೊತ್ಸವ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ನೇತೃತ್ವದಲ್ಲಿ ಕೆಲವು ಸಾಹಿತಿಗಳು ಸೆಪ್ಟೆಂಬರ್ 24ರಂದು ಬೆಳಗ್ಗೆ 9:30 ಕ್ಕೆ ಮಹಿಷಾಸುರನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಆದರೆ, ಕೆಲವು ಸಂಘ-ಸಂಸ್ಥೆಯವರು ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆಗೆ ಮುಂದಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ.