ಬೆಳಗಾವಿ: ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ ರಾಜ್ಯಾದ್ಯಂತ ಸಮೀಕ್ಷೆ ಆರಂಭವಾಗಿದೆ. ಈ ನಡುವೆ ಸಮೀಕ್ಷೆಗೆ ನಡೆಸಬೇಕಾದ ಶಿಕ್ಷಕರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪ್ಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನೇಮಕಗೊಂಡಿರುವ ಶಿಕ್ಷಕರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡಿರುವ ಶಿಕ್ಷಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸರ್ವೆ ಕಾರ್ಯಕ್ಕೆ ಸರ್ಕಾರಿ ಶಾಲೆ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿದೆ. ಅಂಗವಿಕಲ ಶಿಕ್ಷಕರನ್ನು, ನಿವೃತ್ತಿಯಾಗಿರುವ ಶಿಕ್ಷಕರನ್ನೂ, ಅಪಾಘಾತದಲ್ಲಿ ಕಾಲು ಸಮಸ್ಯೆಯಿಂದಾಗಿ ನಡೆದಾಡಲು ಸಾಧ್ಯವಾಗದಂತಹ ಶಿಕ್ಷಕರನ್ನು, 6 ತಿಂಗಳ ಅಂಗವಿಕಲ ಗರ್ಭಿಣಿ, ನಿವೃತ್ತಿ ಅಂಚನಲ್ಲಿರುವ ಶಿಕ್ಷಕರನ್ನು, ಅನಾರೋಗ್ಯದಿಂದ ರಜೆ ಹಾಕಿರುವ ಶಿಕ್ಷಕರನ್ನು, ಗರ್ಭಿಣಿ ಶಿಕ್ಷಕಿಯರನ್ನೂ ಸರ್ವೆ ಕೆಲಸಕ್ಕೆ ನೇಮಿಸಿದ್ದು, ಸರ್ಕಾರದ ಈ ನಡೆ ಖಂಡಿಸಿ ಸರ್ವೆ ಕಾರ್ಯ ಬಿಟ್ಟು ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಪ್ರತಿಭಟನೆ ನಡೆದಿದ್ದು, ಈ ಬಗ್ಗೆ ತಾಲೂಕು ಶಿಕ್ಷಣಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಸರ್ವೆಕಾರ್ಯಕ್ಕೆ ಹೋಗದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚಿಸಿದ್ದಾರೆ. ನಡೆಯಲು ಸಾಧ್ಯವಿಲ್ಲದ, ಮೆಟ್ಟಿಲುಗಳನ್ನು ಹತ್ತಲೂ ಆಗದವರನ್ನೂ ಸಮೀಕ್ಷೆಗೆ ನೇಮಕ ಮಾಡಿದ್ದು, ನಾವು ಸರ್ವೆ ಕಾರ್ಯಕ್ಕೆ ಹೋಗುವುದಾದರೂ ಹೇಗೆ? ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.