ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ರಸ್ತೆ ಗುಂಡಿ ನಡೆಸುವ ಸರ್ಕಾರ. ಇಂತಹ ಸರ್ಕಾರವನ್ನು ನಾನೆಂದೂ ನೋಡಿರಲಿಲ್ಲ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಸಿ.ಪಾಟೀಲ್, 6 ಸಾವಿರ ಗುಂಡಿ, 3 ಸಾವಿರ ಗುಂಡಿ ಎನ್ನುತ್ತಿದ್ದಾರೆ. ಗುಂಡಿ ಮುಚ್ಚಲು ಅಧಿಕಾರಿಗಳನ್ನು ನೇಮಕ ಮಾಡಿರುವ ಸರ್ಕಾರ ಎಂದರೆ ಅದು ಕರ್ನಾತಕದ ಕಾಂಗ್ರೆಸ್ ಸರ್ಕಾರ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲು ಎಂದು ವ್ಯಂಗ್ಯವಾಡಿದರು.
ನಾನು ವಿಮಾನ ನಿಲ್ದಾಣದಿಂದ ನಿನ್ನೆ ರಾತ್ರಿ ನಗರಕ್ಕೆ ಬರುತ್ತಿದ್ದೆ. ಈ ವೇಳೆ ತಡರಾತ್ರಿ ಮಳೆ ಬರುತ್ತಿದ್ದರೂ ಫ್ಲೈಓವರ್ ಬಳಿ ಗುಂಡಿ ಮುಚ್ಚುತ್ತಿದ್ದಾರೆ. ಮಳೆ ಬರುವಾಗ ಗುಂಡಿ ಮುಚ್ಚಿದರೆ ಇರುತ್ತದೆಯಾ? ಜಿಬಿಎ ಅಧಿಕಾರಿಗಳಿಗೆ ಅಷ್ಟು ಪರಿಜ್ಞಾನವೂ ಇಲ್ಲವೇ? ಏನು ಮಾಡಲು ಹೊರಟಿದೆ ಈ ಸರ್ಕಾರ ಎಂದು ಕಿಡಿಕಾರಿದರು.
ಪ್ರಧಾನಿ ಮನೆ ಮುಂದೆಯೂ ಗುಂಡಿ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಸಿ.ಪಾಟೀಲ್, ಪ್ರಧಾನಿ ಮನೆ ಮುಂದೆ ಗುಂಡಿ ಇದ್ದರೆ ಡಿಕೆಶಿ ಮನೆ ಮುಂದೆ ಹೊಂಡ ಮಾಡಿಕೊಳ್ಳಲು ಹೇಳಿ. ಇವರ ಮನೆ ಮುಂದೆ ಒಂದು ಲೇಕ್ ಮಾಡಿಕೊಳ್ಳಲಿ ಎಂದು ಗುಡುಗಿದರು.