ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.
ನೋಟಿಸ್ ಹಿನ್ನೆಲೆಯಲ್ಲಿ ಲೋಕಾಯುಕ್ತ ಕೇಂದ್ರ ಕಚೇರಿಗೆ ಆಗಮಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತನಿಖಾಧಿಕಾರಿ ಹೆಚ್.ಎಂ. ಸತೀಶ್ ಅವರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸಚಿವರಿಗೆ ಸೂಚಿಸಲಾಗಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್, ನಾನು ಕಾನೂನು ಬದ್ಧವಾಗಿ ಹಣಕಾಸು ವ್ಯವಹಾರ ನಡೆಸಿದ್ದೇನೆ. ಅನೇಕ ವರ್ಷಗಳಿಂದ ಸಾರಿಗೆ ಉದ್ಯಮದಲ್ಲಿ ತೊಡಗಿದ್ದೇನೆ. ಆದರೆ, ಅಕ್ರಮವಾಗಿ ಆಸ್ತಿ ಸಂಪಾದಿಸಿಲ್ಲ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗಿದೆ. ಪ್ರತಿ ವರ್ಷವೂ ತೆರಿಗೆ ಪಾವತಿಸಿದ್ದೇನೆ. ಚುನಾವಣೆ ವೇಳೆ ಎಲ್ಲಾ ವಿವರ ನೀಡಿದ್ದೇನೆ ಎಂದು ಲೋಕಾಯುಕ್ತಕ್ಕೆ ವಿವರಣೆ ನೀಡಿದ್ದಾರೆ.
ಜಮೀರ್ ಅಹಮದ್ ಖಾನ್ ಅವರೊಂದಿಗಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿ, ಉದ್ಯಮಿ ಕೆಜಿಫ್ ಬಾಬು ವಿಚಾರಣೆ ನಡೆಸಲಾಗಿದೆ.