ಲಕ್ನೋ: ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ರಿಲೇಷನ್ ಶಿಪ್ ಗಳು ಕೊಲೆಯಲ್ಲಿ ಅಂತ್ಯವಾಗುತ್ತಿರುವ ಘಟನೆ ಹೆಚ್ಚುತ್ತಿದೆ. ಇನ್ ಸ್ಟಾ ಗ್ರಾಂ ನಲ್ಲಿ ಪರಿಚಯಳಾದ ಯುವತಿಯನ್ನು ಪ್ರೀತಿಸಿ, ಆಕೆಯೊಪ್ಂದಿಗೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಪ್ರಿಯಕರ, ಆಕೆಯನ್ನೇ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಆಕಾಂಕ್ಷಾ (20) ಕೊಲೆಯಾದ ಯುವತಿ. ಸೂರಜ್ ಕುಮಾರ್ ಉತ್ತಮ್ ಗೆಳತಿಯನ್ನೇ ಕೊಂದ ಆರೋಪಿ. ಆಕಾಂಕ್ಷಾ ಹಾಗೂ ಸೂರಜ್ ಲಿವಿ-ಇನ್ ಸಂಬಂಧದಲ್ಲಿ ಒಟ್ಟಿಗೆ ವಾಸವಾಗಿದ್ದರು. ಬರಬರುತ್ತಾ ಸೂರಜ್ ಗೆ ಆಕಾಂಕ್ಷಾ ಮೇಲೆ ಅನುಮಾನ ಆರಂಭವಾಗಿದೆ. ಆಕಾಂಕ್ಷಾ ಬೇರೆ ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿರುತ್ತಾಳೆ ಎಂದು ತನ್ನ ಸ್ನೇಹಿತನಿಗೂ ಸೂರಜ್ ಹೇಳಿದ್ದನಂತೆ.
ಇದೇ ಅನುಮಾನದಲ್ಲಿ ಸೂರಜ್, ಆಕಾಂಕ್ಷಾಳನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಬಳಿಕ ಶವವನ್ನು ದೊಡ್ಡ ಬ್ಯಾಗ್ ನಲ್ಲಿ ತುಂಬಿದ್ದಾನೆ. ಹೀಗೆ ಶವವನ್ನು ಬ್ಯಾಗ್ ಗೆ ತುಂಬಿದವನು ಅದರೊದಿಗೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದಿದ್ದಾನೆ. ಬಳಿಕ 100 ಕಿ.ಮೀ ದೂರದಲ್ಲಿರುವ ಬಾಂಡಾಗೆ ಬೈಕ್ ನಲ್ಲಿ ತೆರಳಿ ಯಮುನಾ ನದಿಗೆ ಶವವನ್ನು ಬಿಸಾಕಿದ್ದಾನೆ.
ಯುವತಿ ತಾಯಿ ಆಕಾಂಕ್ಷಾ ನಾಪತ್ತೆಯಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಸೂರಜ್ ಉತ್ತಮ್ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸೂರಜ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಸೂರಜ್ ಹಾಗೂ ಆತನಿಗೆ ಸಹಕರಿಸಿದ ಆತನ ಸ್ನೇಹಿತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.