ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಜಾತಿ ಗಣತಿ ಪ್ರಶ್ನಿಸಿ ಹಲವು ಸಮುದಾಯಗಳು ಸಲ್ಲಿಸಿದ ಅರ್ಜಿಗಳು ಸೋಮವಾರ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿವೆ.
ಸದ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾತ್ರ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಪಟ್ಟಿಯಲ್ಲಿದೆ. ಉಳಿದ ಅರ್ಜಿಗಳು ವಿಷಯ ಪಟ್ಟಿಯಲ್ಲಿ ಇಲ್ಲವಾದರೂ ರಾಜ್ಯ ಒಕ್ಕಲಿಗರ ಸಂಘ, ವೀರಶೈವ ಲಿಂಗಾಯಿತ ಮಹಾಸಭಾ, ಮಾಜಿ ಶಾಸಕರಾದ ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಮೊದಲಾದವರು ಸಲ್ಲಿಸಿದ ಪ್ರತ್ಯೇಕ ಪಿಎಎಲ್ ಗಳನ್ನು ನ್ಯಾಯಾಲಯ ಒಟ್ಟಿಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಕಳೆದ ಶುಕ್ರವಾರ ಮತ್ತೊಂದು ವಿಭಾಗೀಯ ಪೀಠದ ಮುಂದೆ ಅರ್ಜಿಗಳು ವಿಚಾರಣೆಗೆ ಬಂದಾಗ ಕೇಂದ್ರ ಸರ್ಕಾರ, ಭಾರತೀಯ ಜನಗಣತಿ ಆಯೋಗ, ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.
ಇಂದಿನಿಂದ ರಾಜ್ಯದಲ್ಲಿ ಗಣತಿ ಕಾರ್ಯ ಆರಂಭವಾಗಲಿದ್ದು, ವಿಭಾಗೀಯ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದೆ. ಹಲವು ಪ್ರಮುಖ ಜಾತಿ ಸಂಘಟನೆಗಳು ಗಣತಿಗೆ ತಡೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಗಣತಿ ಕಾರ್ಯಕ್ಕೆ ಮಧ್ಯಂತರ ತಡೆ ನೀಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.