ಬೆಂಗಳೂರು: ಪ್ರತಿ ವರ್ಷ ವಿದ್ಯುತ್ ದರ ಏರಿಕೆಗೆ ಶಿಫಾರಸು ಮಾಡವ ಕೆಎಆರ್‌ಸಿ ಮಾದರಿಯಲ್ಲಿ ಪ್ರತಿವರ್ಷ ಕೆಎಸ್ಆರ್ಟಿಸಿ ಸೇರಿ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆಗೆ ಅನುಕೂಲವಾಗುವಂತೆ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸಾರಿಗೆ ನಿಗಮಗಳಿಗೆ ವೈಜ್ಞಾನಿಕವಾಗಿ ಪ್ರಯಾಣದರ ಹೆಚ್ಚಳ ಮಾಡಲು ಈ ಹಿಂದೆ ಯಾವುದೇ ಸಮಿತಿ ರಚಿಸಿರಲಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇತ್ತೀಚೆಗೆ ಪ್ರಯಾಣ ದರ ಏರಿಕೆ ಮಾಡುವ ಬಗ್ಗೆ ಯಾವ ಸರ್ಕಾರ ಕೂಡ ಪ್ರಯತ್ನಕ್ಕೆ ಕೈಹಾಕಿರಲಿಲ್ಲ. ಡೀಸೆಲ್ ದರ ಇನ್ನಿತರೆ ವೆಚ್ಚ ಹೆಚ್ಚಳವಾಗುತ್ತಿದ್ದು, ದರ ಪರಿಷ್ಕರಣೆ ಇಲ್ಲದೆ ಸಾರಿಗೆ ಸಂಸ್ಥೆಗಳು ಆರ್ಥಿಕ ನಷ್ಟದಲ್ಲಿವೆ. ನಷ್ಟ ತಪ್ಪಿಸಿ ದರ ಹೆಚ್ಚಳ ಸರಿದೂಗಿಸಲು ದರ ಪರಿಷ್ಕರಣೆ ಅವಶ್ಯಕವೆಂದು ಕಂಡುಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
2014ರಲ್ಲಿ ಬಿಎಂಟಿಸಿ ದರ ಪರಿಷ್ಕರಿಸಿದ್ದು, ಇತರೆ ಸಾರಿಗೆ ನಿಗಮಗಳು 2020ರಲ್ಲಿ ಪ್ರಯಾಣದರ ಹೆಚ್ಚಳ ಮಾಡಿದ್ದವು. 2014ರಲ್ಲಿ 7 ಕೋಟಿ ರೂಪಾಯಿ ಇದ್ದ ದೈನಂದಿನ ಡೀಸೆಲ್ ವೆಚ್ಚ 2025 ರಲ್ಲಿ 13 ಕೋಟಿ ರೂ.ಗೆ ಹೆಚ್ಚಳವಾಗಿದೆ. ಸಿಬ್ಬಂದಿ ವೆಚ್ಚ 6 ಕೋಟಿ ರೂ.ನಿಂದ 12 ಕೋಟಿಯಾಗಿದ್ದು, ಈ ವೆಚ್ಚಗಳಲ್ಲಿ ಸುಮಾರು ಶೇಕಡ 100ರಷ್ಟು ಏರಿಕೆಯಾಗಿದೆ.
8- 10 ವರ್ಷಗಳಿಗೊಮ್ಮೆ ಏಕಾಏಕಿ ದರ ಪರಿಷ್ಕರಣೆಯಿಂದ ಪ್ರಯಾಣಿಕರಿಗೆ ಹೊರೆಯಾಗುತ್ತದೆ. ಕಾಲಕಾಲಕ್ಕೆ ಅಲ್ಪ ಪ್ರಯಾಣದರ ಏರಿಕೆ ವೈಜ್ಞಾನಿಕವಾಗಿ ಅನುಕೂಲವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಸಮಿತಿಯು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ ನಡೆಸಿ ಕಾಲಕಾಲಕ್ಕೆ ಟಿಕೆಟ್ ದರ ಪರಿಷ್ಕರಣೆಗೆ ಶಿಫಾರಸು ಮಾಡಲಿದೆ.