APK file ಅಥವಾ ಅನಾಮಧೇಯ ಲಿಂಕ್ ಗಳನ್ನು ಬಳಸಿ ಮೊಬೈಲ್ ಹ್ಯಾಕ್ ಮಾಡಿ ಖಾಸಗಿ ಮಾಹಿತಿ ಸೋರಿಕೆ ಹಾಗೂ ಬ್ಯಾಂಕ್ ಖಾತೆ ಹಣ ವರ್ಗಾಯಿಸಿಕೊಂಡು ವಂಚನೆ ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸುವಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.
ಸಾರ್ವಜನಿಕರು ತಮ್ಮ ಅರಿವಿಲ್ಲದೆಯೇ ಇಂತಹ ಲಿಂಕ್ ಗಳನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದರೆ ಕೂಡಲೆ ಎಚ್ಚೆತ್ತುಕೊಳ್ಳಬೇಕು. ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುವುದು. ಮೊಬೈಲ್ ಬಳಸದಿದ್ದರೂ ಬಿಸಿಯಾಗಿರುವುದು. ಮೊಬೈಲ್ ನಲ್ಲಿ ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಲು ವಿಳಂಬವಾಗುವುದು. ಕಾರಣವಿಲ್ಲದೇ ಡಾಟಾ ಖಾಲಿಯಾಗುವುದು. ಅನಪೇಕ್ಷಿತ ಸಾಧನೆಗಳು ಮೊಬೈಲ್ ಹಾಟ್ ಸ್ಪಾಟ್ ಗೆ ಸಂಪರ್ಕ ಪಡೆಯುವುದು. ವಿನಾಕಾರಣ ನೆಟ್ ವರ್ಕ್ ಸಮಸ್ಯೆ ತಲೆದೊರುವುದು. ಆಪ್ ಗಳು ಗಮನಕ್ಕೆ ಬಾರದೇ ಇನ್ಸ್ಟಾಲ್ ಹಾಗೂ ಅನ್ ಇನ್ಸ್ಟಾಲ್ ಆಗುವುದು. ವಿನಂತಿಸದೇ ಇದ್ದರೂ ಈ ಮೇಲ್ ಗೆ ಪಾಸ್ವರ್ಡ್ ರಿಸೆಟ್ ಆಗಿರುವ ಕುರಿತು ಸಂದೇಶಗಳು ಬರುವುದು. ನಿಮ್ಮ ಮೊಬೈಲ್ ಸಂಖ್ಯೆಯಿಂದ ಖಾಸಗಿ ಸಂದೇಶ ಹಾಗೂ ಕರೆಗಳು ಹೊರ ಹೊಗುವುದು ಕಂಡುಬಂದರೆ ಮೊಬೈಲ್ ಹ್ಯಾಕ್ ಆಗಿರುವ ಸಂಭವ ಹೆಚ್ಚಿರುತ್ತದೆ.
ಆದ್ದರಿಂದ ಇಂತಹ ಫೈಲ್ ಹಾಗೂ ಲಿಂಕ್ಗಳನ್ನು ತೆರೆಯುವ ಮುನ್ನ ಎಚ್ಚರದಿಂದ ಇರಬೇಕು.
ಮೊಬೈಲ್ ಹ್ಯಾಕ್ ಆಗಿರುವುದು ಖಚಿತವಾದರೆ ಕೂಡಲೇ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ರದ್ದು ಪಡಿಸಬೇಕು. ಪ್ಲೇ ಸ್ಟೋರ್ ನಲ್ಲಿ e-Scan CERT-In Boot Removal ಟೂಲ್ ಡೌನ್ಲೋಡ್ ಮಾಡಿಕೊಂಡು ಮೊಬೈಲ್ ಸ್ಕ್ಯಾನ್ ಮಾಡಿ ಹ್ಯಾಕಿಂಗ್ ಫೈಲ್ ಹಾಗೂ ಲಿಂಕ್ಗಳನ್ನು ಡಿಲಿಟ್ ಮಾಡಬೇಕು. ಜಿ-ಮೇಲ್, ಫೇಸ್ ಬುಕ್ ಸೇರಿದಂತೆ ಇತರೆ ಪ್ರಮುಖ ಆಪ್ ಪಾಸ್ವರ್ಡ್ ಕೂಡಲೇ ಬದಲಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿ ಹಾಗೂ ದೂರು ನೀಡಲು ಹತ್ತಿರ ಪೊಲೀಸ್ ಠಾಣೆ ಹಾಗೂ ಚಿತ್ರದುರ್ಗ ಜೆ.ಸಿ.ಆರ್ 3ನೇ ಕ್ರಾಸ್ನಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.