ಬೆಂಗಳೂರು: ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ದೇಗುಲಕ್ಕೆ ನುಗ್ಗಿ ಮಹಿಳೆ ಗಣೇಶನಿಗೆ ಚಪ್ಪಲಿ ಹಾರ ಹಾಕಿದ್ದಾಳೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ, ಕಾನೂನು ಸುವ್ಯವ್ಸ್ಥೆ ಎಂಬುದು ಹದಗೆಟ್ಟು ಹೋಗಿದೆ. ಮದ್ದೂರು, ಚಾಮುಂಡಿಬೆಟ್ಟದ ಬಳಿಕ ಈಗ ಬೇಲೂರಿನಲ್ಲಿ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಕರ್ನಾಟಕದಲ್ಲಿ ಟಿಪ್ಪು, ತುಘಲಕ್ ಸರ್ಕಾರವಿದೆ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರು ಹಾಗೂ ಕಾನೂನಿನ ಭವಿಲ್ಲದೇ ಪದೇ ಪದೇ ಈ ರೀತಿ ಘಟನೆಗಳು ನಡೆಯುತ್ತಿವೆ. ಪದೇ ಪದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವಾಗಿತ್ತಿದೆ ಎಂದು ಕಿಡಿಕಾರಿದರು.
ಬೇಲೂರಿನಲ್ಲಿ ಮಹಿಳೆಯೊಬ್ಬರು ದೇವಾಲಯಕ್ಕೆ ನುಗ್ಗಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದಾರೆ. ಈಗ ಮಾನಸಿಕ ಅಸ್ವಸ್ಥೆಯಿಂದ ಈ ಕೃತ್ಯ ನಡೆದಿದೆ ಎನ್ನುತ್ತಾರೆ. ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದವರು ಮಾನಸಿಕ ಅಸ್ವಸ್ಥ ಎಂದರು. ಧರ್ಮಸ್ಥಳದಲ್ಲಿ ತಲೆ ಬುರುಡೆ ತಂದವನು ಮಾನಸಿಕ ಅಸ್ವಸ್ಥ ಅಂತಾರೆ. ಯಾರೇ ಸಿಕ್ಕಿ ಹಾಕಿಕೊಂಡರೂ ಮಾನಸಿಕ ಅಸ್ವಸ್ಥರೆಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಹೇಳುವ ಮೊದಲೇ ಪೊಲೀಸರೂ ಹೇಳುತ್ತಾರೆ. ಮಾನಸಿಕ ಅಸ್ವಸ್ಥರು ಎಂದು ಹೇಳುವುದೇ ಒಂದು ಬ್ರ್ಯಾಂಡ್ ಆಗಿದೆ. ಸದ್ಯ ಉದ್ಘಾಟನಾ ಕಾರ್ಯಕ್ರಮಗಳಿಗೆ ಹೊಗುವವರನ್ನು ಮಾನಸಿಕ ಅಸ್ವಸ್ಥರು ಎಂದು ಹೇಳಿಲ್ಲ, ಅದೇ ಪುಣ್ಯ ಎಂದು ವ್ಯಂಗ್ಯವಾಡಿದ್ದಾರೆ.