HomeLatest Newsಸರ್ಕಾರದ ಹಸ್ತಕ್ಷೇಪವಿಲ್ಲದಿದ್ದಲ್ಲಿ ಸಹಕಾರಿ ಸಂಘಗಳು ಇನ್ನಷ್ಟು ಬಲಿಷ್ಟ: ಆರ್.ಎಂ. ಮಂಜುನಾಥಗೌಡ

ಸರ್ಕಾರದ ಹಸ್ತಕ್ಷೇಪವಿಲ್ಲದಿದ್ದಲ್ಲಿ ಸಹಕಾರಿ ಸಂಘಗಳು ಇನ್ನಷ್ಟು ಬಲಿಷ್ಟ: ಆರ್.ಎಂ. ಮಂಜುನಾಥಗೌಡ

ಶಿವಮೊಗ್ಗ: ಸರ್ಕಾರದ ಯಾವುದೇ ನೆರವಿಲ್ಲದೆ, ಸರ್ಕಾರಗಳು ಮಾಡದಿರುವ ಸಮಾಜಮುಖಿ ಕಾರ್ಯವನ್ನು ಸಹಕಾರ ಸಂಘಗಳು ಮಾಡುತ್ತಿರುವುದು ಮಾದರಿ ಕಾರ್ಯಗಳಲ್ಲೊಂದಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.

ಅವರು ಇಂದು ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ದ್ವಾರಕಾ ಕನ್ವೆನ್ಶನ್‌ ಹಾಲ್‌ ನಲ್ಲಿ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಯಾವುದೇ ಸಹಕಾರ ಸಂಘಗಳು ಜಾತಿ, ಪಕ್ಷ ಮತ್ತು ಲಿಂಗಭೇದ ಮರೆತು ಕಾರ್ಯನಿರ್ವಹಿಸುವಂತಾಗಬೇಕು. ಯಾವುದೇ ಸಹಕಾರಿ ಸಂಸ್ಥೆ ನಾಯಕನ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿರುತ್ತವೆ. ನಗರದ ಬೆಳವಣಿಗೆಯಲ್ಲಿ ಇಂತಹ ಸಹಕಾರ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಘಗಳಲ್ಲಿ ಎಲ್ಲರಿಗೂ ಸರಳವಾಗಿ ಸುಲಭವಾಗಿ ಸಾಲ ಸೌಲಭ್ಯಗಳು ದೊರೆಯುವಂತಾಗಬೇಕು. ಆಗ ನಿಜವಾದ ಸಹಕಾರದ ಪದಕ್ಕೆ ಅರ್ಥ ಬರಲಿದೆ. ಇದರಿಂದಾಗಿ ಅರ್ಹರಿಗೆ ಸಾಲಸೌಲಭ್ಯ ದೊರೆಯುವುದು ಮಾತ್ರವಲ್ಲ, ಪರೋಕ್ಷವಾಗಿ ಉದ್ಯೋಗ ಸೃಷ್ಠಿಯಾಗಲಿದೆ. ಸಾಲ ಪಡೆದವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಇನ್ನೊಬ್ಬರ ಅವಶ್ಯಕತೆಗಳಿಗೆ ಸಹಕರಿಸಬೇಕು. ಸರ್ಕಾರದ ಹಸ್ತಕ್ಷೇಪವಿಲ್ಲದಿದ್ದಲ್ಲಿ ಸಹಕಾರಿ ಸಂಘಗಳು ಇನ್ನಷ್ಟು ರಚನಾತ್ಮಕವಾಗಿ ಕಾರ್ಯನಿರ್ವಹಿಸಲಿವೆ ಎಂದರು.

ಸೌಹಾರ್ದ ಸಹಕಾರ ಸಂಘದಲ್ಲಿ 3600 ಮತ್ತು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 4800ಕ್ಕೂ ಹೆಚ್ಚಿನ ಜನ ಸದಸ್ಯತ್ವ ಪಡೆದಿರುವುದು ಹಾಗೂ ಈವರಗೆ ಗೃಹನಿರ್ಮಾಣ ಸಹಕಾರ ಸಂಘದ ವತಿಯಿಂದ ಸುಮಾರು 175 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ವಿತರಿಸಿರುವುದು ಅತ್ಯಂತ ಪ್ರಶಂಸನಾರ್ಹ ಸಂಗತಿಯಾಗಿದೆ. ಇದರಿಂದಾಗಿ ಪ್ರತಿ ವ್ಯಕ್ತಿಯೂ ಚಿಕ್ಕದಾದರೂ ತನ್ನ ಕನಸಿನ ಮನೆಯನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ನೌಕರರ ಸಂಘದ ವತಿಯಿಂದ ಸ್ಥಾಪಿಸಲಾಗಿರುವ ಎರಡೂ ಸಂಘಗಳು “ಎ” ಶ್ರೇಣಿಯಲ್ಲಿ ಗುರುತಿಸಿಕೊಳ್ಳುವ ಸ್ಥಾನಮಾನ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

11ವರ್ಷಗಳ ಅವಧಿಯಲ್ಲಿ ಸಂಘಟನೆಗೆ ಸಣ್ಣ ಕಪ್ಪುಚುಕ್ಕೆಯೂ ಬಾರದಂತೆ ನಡೆಸಿಕೊಂಡು ಬರಲಾಗಿದೆ. ಪ್ರಸಕ್ತ ಅವಧಿಯಲ್ಲಿ ಸಂಘವು ಸುಮಾರು 1.50ಕೋಟಿ ಲಾಭ ಗಳಿಸಿರುವುದು ಸಂತಸದ ವಿಷಯವಾಗಿದೆ. ಇಂತಹ ಸಂಘಟನೆಯನ್ನು ಆರಂಭದ ಹಂತದಲ್ಲಿ ರಾಜ್ಯದ ನೆರೆಯ ಜಿಲ್ಲೆಗಳಿಗೆ ನಂತರ ರಾಜ್ಯದ ಉದ್ದಗಲಕ್ಕೆ ವಿಸ್ತರಿಸುವ ಉದ್ಧೇಶ ಹೊಂದಲಾಗಿದೆ ಎಂದರು.

ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಈವರೆಗೆ ಸುಮಾರು 2500ಕ್ಕೂ ಹೆಚ್ಚಿನ ನೌಕರರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನಿವೇಶನಗಳನ್ನು ವಿತರಿಸಲಾಗಿದೆ. ಅಲ್ಲದೇ ಈಗಾಗಲೇ 110ಎಕರೆ ಭೂಪ್ರದೇಶದಲ್ಲಿ ಗುಣಮಟ್ಟದ ಕಾಮಗಾರಿಗಳೊಂದಿಗೆ ಕಾನೂನುಬದ್ದವಾಗಿ ಸೃಜಿಸಲಾಗಿರುವ 1500ನಿವೇಶನಗಳನ್ನು ಶೀಘ್ರದಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಮಹಾಸಭೆಯಲ್ಲಿ ನೌಕರರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಷೇರುದಾರರ ಉಪಸ್ಥಿತಿಯಲ್ಲಿ ಸಂಘದ ಮಹಾಸಭೆಯಲ್ಲಿ ಅನೇಕ ವಿಷಯಗಳ ಕುರಿತು ಚರ್ಚಿಸಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಡಿ.ಸಿ.ಸಿ.ಬ್ಯಾಂಕ್‌ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್‌, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಚಂದ್ರಶೇಖರ ಕಲ್ಮನೆ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌, ಆರ್.ಪಾಪಣ್ಣ, ಎನ್.ಎಂ.ರಂಗನಾಥ್‌, ನರಸಿಂಹಮೂರ್ತಿ, ದಿನೇಶ್‌, ಪ್ರಸನ್ನ, ಸುರೇಶ್‌, ಕೃಷ್ಣಮೂರ್ತಿ, ಸಿದ್ಧಬಸಪ್ಪ ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular