ಬೇಲೂರು: ಬೇಲೂರು ಪಟ್ಟಣದ ಪುರಸಭೆ ಆವರಣದಲ್ಲಿರುವ ಗಣೇಶ ದೇವಾಲಯದಲ್ಲಿ ಗಣೇಶ ಮೂರ್ತಿ ಮೇಲೆ ಕಿಡಿಗೇದಿಗಳು ಚಪ್ಪಲಿ ಇಟ್ಟಿರುವ ಪ್ರಕರಣ ಖಂಡಿಸಿ ಭಕ್ತರು, ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.
ಗಣೇಶ ಮೂರ್ತಿಗೆ ಅವಮಾನ ಮಾಡಲಾಗಿದ್ದು, ಈ ಕೃತ್ಯವೆಸಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಸಾರ್ವಜನಿಕರು, ಭಕ್ತರು ಆಗ್ರಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಿರುವವರೆಗೂ ಕದಲುವುದಿಲ್ಲ ಎಂದು ದೇವಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳ ಪತ್ತೆಕಾರ್ಯ ನಡೆಯುತ್ತಿದೆ, ಪ್ರತಿಭಟನೆ ನಿಲ್ಲಿಸುವಂತೆ ಮನವೊಲಿಕೆಗೆ ಪೊಲೀಸರು ಮುಂದಾಗಿದ್ದಾರೆ. ಆದರೆ ಪ್ರತಿಭಟನಾಕಾರರು ತಪ್ಪಿತಸ್ಥರನ್ನು ಬಂಧಿಸುವವರೆಗೂ ಹೋರಾಟ ನಿಲ್ಲಿಸಲ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸರು, ಧರಣಿ ನಿರತರ ನಡುವೆ ವಾಗ್ವಾದ ನಡೆದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.