ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧೆಡೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಕಾರಣಕ್ಕೆ ಸೆಪ್ಟೆಂಬರ್ 26 ರಿಂದ ಕೆಎಸ್ಆರ್ಟಿಸಿ 2300 ಹೆಚ್ಚುವರಿ ಬಸ್ ಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ.
ಆಯುಧ ಪೂಜೆ, ವಿಜಯದಶಮಿ ಹಾಗೂ ಶಾಲಾ ಮಕ್ಕಳಿಗೆ ದಸರಾ ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳುವವರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಎಸ್ಆರ್ಟಿಸಿ ಸೆಪ್ಟೆಂಬರ್ 26, 27 ಮತ್ತು 30ರಂದು 2300 ಹೆಚ್ಚುವರಿ ಬಸ್ ಗಳನ್ನು ಓಡಿಸಲಿದೆ. ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ. ಈ ಹೆಚ್ಚುವರಿ ಬಸ್ ಗಳು ವಿವಿಧ ನಗರಗಳಿಂದ ಬೆಂಗಳೂರಿಗೆ ಅಕ್ಟೋಬರ್ 2 ಮತ್ತು 5 ರಂದು ಸೇವೆ ನೀಡಲಿವೆ.
ಮೈಸೂರು ದಸರಾ ವೀಕ್ಷಣೆಗಾಗಿ ಕೆಎಸ್ಆರ್ಟಿಸಿ 610 ವಿಶೇಷ ಸಾರಿಗೆ ವ್ಯವಸ್ಥೆ ಮತ್ತು ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ 260 ಹೆಚ್ಚುವರಿ ಬಸ್ ಗಳು ಸೇವೆ ನೀಡಲಿವೆ.
ಮೈಸೂರು ಸುತ್ತಮುತ್ತಲಿನ ಪ್ರದೇಶಗಳಾದ ಕೆಆರ್‌ಎಸ್ ಅಣೆಕಟ್ಟು, ಚಾಮುಂಡಿ ಬೆಟ್ಟ, ನಂಜನಗೂಡು, ಶ್ರೀರಂಗಪಟ್ಟಣ, ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ. ಕೋಟೆ, ಚಾಮರಾಜನಗರ, ಹುಣಸೂರು, ಕೆಆರ್ ನಗರ, ಗುಂಡ್ಲುಪೇಟೆ ಮೊದಲಾದ ಸ್ಥಳಗಳಿಗೆ 350 ಹೆಚ್ಚುವರಿ ಬಸ್ ಗಳನ್ನು ಕಾರ್ಯಾಚರಣೆಗಿಳಿಸಲಾಗುವುದು.
ಅದೇ ರೀತಿಯಾಗಿ ಮೈಸೂರು ಪ್ರವಾಸಕ್ಕೆ ಬರುವವರಿಗೆ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 7ರವರೆಗೆ ಮೂರು ವಿಧದ ಪ್ರವಾಸಿ ಪ್ಯಾಕೇಜ್ ಸೇವೆ ನೀಡಲಾಗುವುದು. ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ ಗಿರಿ ದರ್ಶಿನಿ ಪ್ರವಾಸ ಪ್ಯಾಕೇಜ್ ನೀಡಲಾಗಿದೆ. ಜಲದರ್ಶಿನಿ ಹೆಸರಿನ ಪ್ಯಾಕೇಜ್ ನಲ್ಲಿ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ, ಕೆ.ಆರ್.ಎಸ್. ಪ್ರವಾಸ ಪ್ಯಾಕೇಜ್ ಕಲ್ಪಿಸಲಾಗಿದೆ. ದೇವ ದರ್ಶನಿ ಹೆಸರಿನ ಪ್ಯಾಕೇಜ್ ನಲ್ಲಿ ನಂಜನಗೂಡು, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಕ್ಕೆ ಪ್ರವಾಸ ಕರೆದುಕೊಂಡು ಹೋಗಲಾಗುವುದು. ಮೈಸೂರಿನಿಂದ ಈ ಪ್ರವಾಸ ಪ್ಯಾಕೇಜ್ ಇರುತ್ತದೆ. ಎಲ್ಲಾ ಸೇವೆಗಳ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ಮುಂಗಡ ಟಿಕೆಟ್ ಕಾಯಿರಿಸಲು www.ksrtc.karnataka.gov.in ವೆಬ್ಸೈಟ್ ಗಮನಿಸಬಹುದಾಗಿದೆ.