ಬಿಜೆಪಿ ಸರ್ಕಾರದ ಅವಧಿಯಲ್ಲಿ 24 ಹಿಂದೂ ದೇವಾಲಯಗಳ ಪೂಜಾ ಶುಲ್ಕ ಏರಿಸಲಾಗಿತ್ತು, ಇದನ್ನೂ ಧರ್ಮ ವಿರೋಧಿ ನಡೆ ಎನ್ನಬಹುದೇ? : ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ 24 ಹಿಂದೂ ದೇವಾಲಯಗಳ ಪೂಜಾ ಶುಲ್ಕ ಏರಿಸಲಾಗಿತ್ತು. ಇದನ್ನೂ ಧರ್ಮ ವಿರೋಧಿ ನಡೆ ಎನ್ನಬಹುದೇ? ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.

ರಾಜಕೀಯದಲ್ಲಿ ಧರ್ಮದ ಪಾಲನೆ ಇರಬೇಕು, ಎಂದಿಗೂ ಧರ್ಮದಲ್ಲಿ ರಾಜಕಾರಣ ಮಾಡಬಾರದು.
ಇದು ನನ್ನ ಮತ್ತು ನಮ್ಮ ಪಕ್ಷದ ಬದ್ಧತೆ.ಧರ್ಮ, ದೇವರು ಬಿಟ್ಟರೆ ಅಸ್ತಿತ್ವವೇ ಇಲ್ಲವೆಂಬ ದುಸ್ಥಿತಿಗೆ ರಾಜ್ಯದ BJP Karnataka ಪಕ್ಷ ತಲುಪಿರುವುದು ನೋಡಿ ಮರುಕ ಪಡಬಹುದಷ್ಟೇ.

ನಮ್ಮ ಬಗ್ಗೆ ಟೀಕಿಸುವ ಮೊದಲು, ನಿಮ್ಮದೇ ಸ್ವಘೋಷಿತ ಧರ್ಮರಕ್ಷಕರ ಸರ್ಕಾರದಲ್ಲಿ ಏನಾಗಿತ್ತು ಎನ್ನುವುದನ್ನು ಒಮ್ಮೆ ನೆನಪಿಸಿಕೊಂಡಿದ್ದರೆ ಉತ್ತಮವಿತ್ತು, ಅದನ್ನೂ ನಾವೇ ಮಾಡಬೇಕಾಗಿ ಬಂದಿದ್ದು ದುರದೃಷ್ಟಕರ.
ಧರ್ಮ ರಕ್ಷಣೆಗಾಗಿಯೇ ಅಧಿಕಾರಕ್ಕೆ ಬಂದವರು ನಾವು ಎನ್ನುವ ‘ನಕಲಿ ಧರ್ಮರಕ್ಷಕ’ ಬಿಜೆಪಿ ಸರ್ಕಾರದ 2019-2023 ಅವಧಿಯಲ್ಲಿ 24 ಹಿಂದೂ ದೇವಾಲಯಗಳ ಪೂಜಾ ಶುಲ್ಕ ಏರಿಸಲಾಗಿತ್ತು. ಇದನ್ನೂ ಧರ್ಮ ವಿರೋಧಿ ನಡೆ ಎನ್ನಬಹುದೇ?

ಈಗ ರಾಜ್ಯದ ವಿವಿಧ ಭಾಗದ 14 ದೇವಾಲಯಗಳ ಸೇವಾಶುಲ್ಕ ಹೆಚ್ಚಳವಾಗಿದೆ. ಈ ದೇವಾಲಯಗಳ ಸೇವಾಶುಲ್ಕವು ಕಡೆ ಬಾರಿ ಪರಿಷ್ಕರಣೆಯಾಗಿದ್ದು ಸುಮಾರು 7 ರಿಂದ 15 ವರ್ಷಗಳ ಹಿಂದೆ, ಇದನ್ನು ಪರಿಷ್ಕರಣೆ ಮಾಡುವ ನಿರ್ಣಯ ಕೈಗೊಂಡಿರುವುದು ಕೂಡ ದೇವಾಲಯಗಳ ವ್ಯವಸ್ಥಾಪನಾ ಮಂಡಳಿ ಅಥವಾ ಆಡಳಿತ ಮಂಡಳಿಗಳು. ಹೊಸ ಸೇವಾಶುಲ್ಕದಿಂದ ಸಂಗ್ರಹವಾಗುವ ಹಣ ಕೂಡ ಅದೇ ದೇವಾಲಯಗಳ ನಿರ್ವಹಣೆ, ಅಭಿವೃದ್ಧಿಗೆ ಬಳಕೆಯಾಗಲಿದೆ.

ಇಲ್ಲಿ ಸರ್ಕಾರದ ಹಸ್ತಕ್ಷೇಪವೇ ಇಲ್ಲದಿರುವಾಗ ದಿನಾ ಬೆಳಗೆದ್ದು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ದೂರುತ್ತಾ, ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಹತಾಶ ಪ್ರಯತ್ನ ಮಾಡುತ್ತಿದ್ದಾರೆ.ಧರ್ಮ, ದೇವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚು ಕಾಲ ಅಮಾಯಕ ಜನರನ್ನು ವಂಚಿಸಲು ಸಾಧ್ಯವಿಲ್ಲ ಎನ್ನುವುದು ಕಳೆದ ಚುನಾವಣೆಯಲ್ಲಿಯೇ ಬಿಜೆಪಿ ನಾಯಕರಿಗೆ ಅರಿವಾಗಬೇಕಿತ್ತು, ಆದರೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಧರ್ಮ – ಧರ್ಮಗಳನ್ನು ಎತ್ತಿಕಟ್ಟಿ ಸಮಾಜ ಒಡೆಯುವ ನಿಮಗೆ ದೇವರೇ ಸದ್ಬುದ್ದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read