ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಚಕಮಕಿಯಲ್ಲಿ ಸೈನಿಕನೊಬ್ಬರು ಹುತಾತ್ಮರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದೇ ವೇಳೆ ಜೈಶ್ ಎ ಮೊಹಮ್ಮದ್ ಸಂಘಟನೆಯವರು ಎನ್ನಲಾದ ನಾಲ್ವರು ಶಂಕಿತ ಉಗ್ರರು ಭದ್ರತಾ ಪಡೆಯ ಬಲೆಗೆ ಬಿದ್ದಿದ್ದಾರೆ.
ಜಮ್ಮು ಪ್ರದೇಶದ ಉಧಂಪುರ, ದೋಡಾ ಮತ್ತು ಕಥುವಾ ಜಿಲ್ಲೆಗಳನ್ನು ಸಂಪರ್ಕಿಸುವ ಪರ್ವತ ಶ್ರೇಣಿಯ ತ್ರಿ-ಜಂಕ್ಷನ್ ಆಗಿರುವ ಉಧಂಪುರ ಬಸಂತಗಢ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಸೇನೆಯು ತಿಳಿಸಿದ ನಂತರ ನಿನ್ನೆ ಸಂಜೆ ಈ ಎನ್ಕೌಂಟರ್ ಸಂಭವಿಸಿದೆ.
ಬಸಂತಗಢವು ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಆಗಾಗ್ಗೆ ಮುಖಾಮುಖಿಗಳಿಗೆ ಸಾಕ್ಷಿಯಾಗಿದೆ. ಕಳೆದ ಎರಡು ವಾರಗಳಲ್ಲಿ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡನೇ ಪ್ರಮುಖ ಎನ್ಕೌಂಟರ್ ಆಗಿದೆ. ಇದಕ್ಕೂ ಮೊದಲು, ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಇಬ್ಬರು ಸೈನಿಕರು ಸಾವನ್ನಪ್ಪಿದ್ದರು. ಈ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.