ಕಾರವಾರ: ಪತ್ನಿಯನ್ನು ಊರಿಗೆ ಕರೆದೊಯ್ಯುವ ನೆಪದಲ್ಲಿ ಊಟದಲ್ಲಿ ವಿಷ ಬೆರೆಸಿಕೊಟ್ಟು ಕೊಲೆಗೈದು, ಬಳಿಕ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದ ಪತಿ ಮಹಾಶಯನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಬೀದರ್ ಮೂಲದ ಪರ್ವಿನ್ ಬೇಗಂ (೪೫) ಕೊಲೆಯಾದ ಮಹಿಳೆ. ಇಸ್ಮಾಯಿಲ್ ದಫೇದಾರ್ ಪತ್ನಿಯನ್ನೇ ಕೊಂದ ಆರೋಪಿ.
ಇಸ್ಮಾಯಿಲ್ ಹಾಗೂ ಪರ್ವಿನ್ ಬೇಗಂ ದಂಪತಿ ಉತ್ತರ ಕನ್ನಡ ಜಿಲ್ಲೆಯ ಚಿತ್ತಾಕುಲ ಬಳಿ ವಾಸವಾಗಿದ್ದರು. ಇಸ್ಮಾಯಿಲ್ ತನ್ನ ಸ್ನೇಹಿತನ ಜೊತೆ ಸೇರಿ ಪ್ಲಾನ್ ಮಾಡಿ ಪತ್ನಿಯನ್ನೇ ಕೊಲೆಗೈದಿದ್ದಾನೆ. ತನಗೆ ಅನಾರೋಗ್ಯವಿದೆ ಎಂದು ಹೇಳಿ ಪತ್ನಿ ಪರ್ವೀನ್ ಬೇಗಂ ಳಾನ್ನು ಕಾರವಾರದ ಹಳಗ ಬಳಿ ಆಸ್ಪತ್ರೆಗೆ ಹೋಗಬೇಕು ಎಂದು ಕರೆದೊಯ್ದಿದ್ದ. ಬಳಿಕ ಆತನ ಸ್ನೇಹಿತ ಕೂಡ ಕಾರಿನಲ್ಲಿ ಅಲ್ಲಿಗೆ ಬಂದಿದ್ದ. ಹಳಗದಿಂದ ಕಾರಿನಲ್ಲಿ ಬೀದರ್ ಗೆ ಹೋಗೋಣ ಎಂದು ಪತ್ನಿಯನ್ನು ನಂಬಿಸಿದ್ದ. ಮಾರ್ಗ ಮಧ್ಯೆ ಊಟಕ್ಕಾಗಿ ಕಾರು ನಿಲ್ಲಿಸಿದ್ದ ವೇಳೆ ಊಟದಲ್ಲಿ ವಿಷ ಬೆರಸಿ ಪತ್ನಿಗೆ ನೀಡಿದ್ದಾನೆ. ಊಟ ಮಾಡಿದ ಪತ್ನಿ ಅಸ್ವಸ್ಥಳಾಗಿ ಕೆಲಸಮಯದಲ್ಲೇ ಸಾವನ್ನಪ್ಪಿದ್ದಾಳೆ.
ಮೃತದೇಹವನ್ನು ಅಣಶಿ ಘಟ್ಟದ ಅರಣ್ಯದೊಳಗೆ ಬಿಸಾಕಿ ಮನೆಗೆ ವಾಪಸ್ ಆಗಿದ್ದಾನೆ. ಬಳಿಕ ಮಾರನೆ ದಿನ ಪತ್ನಿ ಕಾಣುತ್ತಿಲ್ಲ, ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರಿಗೆ ಪತಿಯ ಮೇಲೆಯೇ ಅನುಮಾನ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನೇ ಪತ್ನಿಯ ಮೇಲೆ ಅನುಮಾನಕ್ಕೆ ಆಕೆಯನ್ನು ಕೊಲೆಗೈದಿದ್ದಾಗಿ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.