ಗ್ವಾಲಿಯರ್: ಕುಡಿತದ ಚಟಕ್ಕೆ ಬಿದ್ದಿದ್ದ ವ್ಯಕ್ತಿ, ಅಂಗಡಿಯಿಂದ ಹಣ ಕದಿಯುತ್ತಿದ್ದುದನ್ನು ಮಗಳು ತಡೆದಿದ್ದಕ್ಕೆ ಕೋಪಗೊಂಡು ಮಗಳನ್ನೇ ಕೊಂದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಗ್ವಾಲಿಯರ್ ನ ಜನಕ್ ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾದಮ್ ಸಿಂಗ್ ಕುಶ್ವಾಹ ಎಂಬಾತ ತನ್ನ ಮಗಳು ರಾಣಿಯ ಕಣ್ಣಿಗೆ ಖಾರದಪುಡಿ ಎರಚಿ ಬಳಿಕ ಚಾಕುವಿನಿಂದ ಇರಿದು ಕೊಂದು ಹತ್ಯೆ ಮಾಡಿದ್ದಾನೆ.
ಬಾದಮ್ ಸಿಂಗ್ ಮೊದಲು ಆಟೋ ಓಡಿಸುತ್ತಿದ್ದ. ಲಾಕ್ ಡೌನ್ ಸಮಯದಲ್ಲಿ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದ. ಜೀವನೋಪಾಯಕ್ಕಾಗಿ ಕುಟುಂಬ ಒಂದು ಸಣ್ಣ ದಿನಸಿ ಅಂಗಡಿ ನಡೆಸುತ್ತಿತ್ತು. ಅದನ್ನು ಕಿರಿಯ ಮಗಳು ನೋಡಿಕೊಳ್ಳುತ್ತಿದ್ದಳು. ಬಾದಮ್ ಸಿಂಗ್ ಆಗಾಗ ಅಂಗಡಿಗೆ ಹೋಗಿ ಕೌಂಟರ್ ನಲ್ಲಿ ಕುಳಿತುಕೊಳ್ಳುತ್ತಿದ್ದ. ಕುಡಿತದ ಚಟ ಬೇರೆ ಇದ್ದಿದ್ದರಿಂದ ಕುಡಿತಕ್ಕಾಗಿ ಅಂಗಡಿ ಕೌಂಟರ್ ನಿಂದ ಆಗಾಗ ಹಣ ಕದಿಯುತ್ತಿದ್ದ.
ರಾಣಿ ತನ್ನ ತಂದೆಗೆ ಕುಡಿತದ ಚಟ ಬಿಡುವಂತೆ ಹೇಳುತ್ತಿದ್ದಳು. ಅಲ್ಲದೇ ಕೌಂಟರ್ ನಿಂದ ಹಣ ಕದಿಯುತ್ತಿರುವುದನ್ನು ನೋಡಿದ್ದಳು. ಹಣ ಕದಿಯುತ್ತಿರುವುದನ್ನು ತಡೆದಿದ್ದಕ್ಕೆ ಕೋಪಗೊಂಡ ತಂದೆ ಬಾದಮ್ ಮಗಳ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೇ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಮಗಳು ಸಾವನ್ನಪ್ಪಿದ್ದಾಳೆ.
ಸದ್ಯ ಆರೋಪಿ ಬಾದಮ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿತದ ಚಟಕ್ಕೆ ಹಣ ಕದಿಯಲು ಹೋಗಿ ಮಗಳನ್ನೇ ಬಲಿಪಡೆದಿದ್ದಾನೆ ವ್ಯಕ್ತಿ.