ಬೆಂಗಳೂರು: ಬಿಜೆಪಿಯವರೇ ಮತಗಳ್ಳತ ಮಾಡುತ್ತಿದ್ದಾರೆ. ನನ್ನ ಬಳಿ ಅಧಿಕೃತ ದಾಖಲೆಗಳಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಆಳಂದದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಆಳಂದದಲ್ಲಿ ಮತಗಳುವು ನಡೆದಿರುವುದು ನಿಜ. ಈ ಬಗ್ಗೆ ನಾವೂ ದೂರು ಕೊಟ್ಟಿದ್ದೆವು. 2023ರ ಚುನಾವಣೆಗೂ ಮುನ್ನ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೂ ಗೊತ್ತಿಲ್ಲದೇ ಡಿಲಿಟ್ ಆಗಿದೆ. ಅದರ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಹಾಗೂ ನಾನು ಎಲೆಕ್ಷನ್ ಕಮಿಷನ್ ಗೆ ದೂರು ನೀಡಿದ್ದೆವು. ಕಲಬುರಗಿಯಲ್ಲಿ ಈ ಬಗ್ಗೆ ಎಫ್ ಐ ಆರ್ ಕೂಡ ದಾಖಲಿಸಲಾಗಿತ್ತು. ಪರಿಶೀಲಿಸಿದಾಗ 28ಜನರಿಗೆ ಮಾತ್ರ ಮಾಹಿತಿ ಇತ್ತು. ಉಳಿದವರಿಗೆ ಯಾರಿಗೂ ಗೊತ್ತಿಲ್ಲ ಎಂದು ತಿಳಿದುಬಂದಿತ್ತು. ಹತ್ತಾರು ಮೊಬೈಲ್ ನಂಬರ್ ಗಳಿಂದ ಅರ್ಜಿ ಹಾಕಲಾಗಿದೆ. ನನ್ನ ವೋಟ್ ಡಿಲಿಟ್ ಆಗಬೇಕು ಎಂದು ನನಗೇ ಗೊತ್ತಿಲ್ಲದೇ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಪರಿಶೀಲಿಸಿದಾಗ ಮೊಬೈಲ್ ನಂಬರ್ ಗಳು ಮಧ್ಯಪ್ರದೇಶ, ಗುಜರಾತ್, ಬಿಹಾರಗಳಲ್ಲಿ ಪತ್ತೆಯಾಗಿದೆ ಎಂದರು.
ಸಿಐಡಿಯವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು, ಮೊಬೈಲ್ ನಂಬರ್, ಐಪಿ ಅಡ್ರೆಸ್ ಎಲ್ಲೆಲ್ಲಿದೆ ಎಂದು ಮಾಹಿತಿ ಕೇಳಿದ್ದರು. ಎಲೆಕ್ಷನ್ ಕಮಿಷನ್ ಅವರು ಹೇಗೆ ಲಾಗಿನ್ ಕೊಟ್ಟರು? ಎಲ್ಲಾ ಟೆಕ್ನಿಕಲ್ ಡೀಟೇಲ್ಸ್ ಕೇಳಿದ್ದರು. ಆದರೆ ಎಲೆಕ್ಷನ್ ಕಮಿಷನ್ ನಿಂದ ಯಾವುದೇ ಉತ್ತರ ಬಂದಿಲ್ಲ. ಎರಡು ವರ್ಷ ಕಳೆದರೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಕಿಡಿಕಾರಿದರು.
ಚುನಾವಣಾ ಆಯೋಗಕ್ಕೆ 18 ಪತ್ರ ಬರೆಯಲಾಗಿದೆ. ಆದರೂ ಈ ಬಗ್ಗೆ ಯಾವುದೇ ಉತ್ತರ ಕೊಡದೇ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಬಿಜೆಪಿಗಾಗಿ ಮಾಡುತ್ತಿರುವ ಕೆಲಸ. ಏನು ಮಾಡಿದ್ದಾರೆ ಎಂಬುದು ನಮಗೆ ಈಗಾಗಲೇ ಮಾಹಿತಿ ಬಂದಿದೆ. ಆದರೆ ಅಧಿಕೃತ ಮಾಹಿತಿ ಚುನಾವಣಾ ಆಯೋಗದಿಂದ ಬರಲಿ. ಎಲೆಕ್ಷನ್ ಕಮಿಷನ್ ಕೇಖ್ಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.