ಹಾಸನ: ಜಾವಗಲ್ ಹೋಬಳಿ ಬಂದೂರು ಗ್ರಾಮದಲ್ಲಿ ಅಪ್ರಾಪ್ತನೊಬ್ಬ ಕಲ್ಲಿನಿಂದ ಹಲ್ಲೆ ನಡೆಸಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಂದೂರು ಗ್ರಾಮದ ಬಳಿ ಘಟನೆ ನಡೆದಿದೆ. ಕಲ್ಲಿನಿಂದ ಹಲ್ಲೆ ನಡೆಸಿ ಮೀನಾಕ್ಷಮ್ಮ(45) ಅವರನ್ನು ಕೊಲೆ ಮಾಡಲಾಗಿದೆ. ತಂದೆ -ತಾಯಿ ಇಲ್ಲದ ತಬ್ಬಲಿಯಾಗಿ ಬೆಳೆದಿದ್ದ ಅಪ್ರಾಪ್ತನಿಂದ ಕೃತ್ಯ ನಡೆದಿದೆ. ಚಿಕ್ಕಂದಿನಲ್ಲಿದ್ದಾಗಲೇ ಆರೋಪಿಯ ಪೋಷಕರು ಮೃತಪಟ್ಟಿದ್ದರು. ಆರೋಪಿ ಮನೆಯಲ್ಲಿ ಮೀನಾಕ್ಷಮ್ಮ ಮನೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮೀನಾಕ್ಷಮ್ಮ ಮತ್ತು ಅಪ್ರಾಪ್ತ ಜಗಳ ಮಾಡಿಕೊಂಡಿದ್ದರು.
ಬಂದೂರು ಗ್ರಾಮದಲ್ಲಿ ಮೀನಾಕ್ಷಮ್ಮ ಹೊಸ ಮನೆ ನಿರ್ಮಿಸಿದ್ದರು. ಸೆಪ್ಟೆಂಬರ್ 15ರಂದು ಮೀನಾಕ್ಷಮ್ಮ ಜೊತೆಗೆ ಆರೋಪಿ ಜಗಳವಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಮೀನಾಕ್ಷಮ್ಮ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಗ್ರಾಮದ ಪವನ್ ಎಂಬುವವರ ತೋಟದಲ್ಲಿ ಮೀನಾಕ್ಷಮ್ಮ ಅವರ ಕೊಲೆ ನಡೆದಿತ್ತು. ತಾಯಿಯ ಸಾವಿನ ಬಗ್ಗೆ ಪುತ್ರ ದಿನೇಶ್ ಅನುಮಾನ ವ್ಯಕ್ತಪಡಿಸಿದ್ದರು. ಸೆಪ್ಟೆಂಬರ್ 16ರಂದು ಅನುಮಾನಾಸ್ಪದ ಸಾವು ಎಂದು ಜಾವಗಲ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.