ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ಡಿಸೆಂಬರ್-2025ರ ಮಾಹೆಯಲ್ಲಿ ನಡೆಯುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲಾ/ಕಾಲೇಜುಗಳಿಂದ ಹಾಜರಾಗುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದಲ್ಲದೆ ಖಾಸಗಿ ಅಭ್ಯರ್ಥಿಗಳು ಸಹ ಈ ಪರೀಕ್ಷೆಗೆ ಹಾಜರಾಗಲು ಅರ್ಜಿಗಳನ್ನು ಸಮೀಪದ ಪರೀಕ್ಷಾ ಕೇಂದ್ರದ ಮುಖಾಂತರ ಸಲ್ಲಿಸಬಹುದಾಗಿದೆ. ಸದರಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ತಮ್ಮ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವ ಅರ್ಹ ಅಭ್ಯರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳು https://kseab.karnataka.gov.in/Login/Other Exams Portal/Drawing Examination Center Login Upload ಮಾಡಲು ಸೂಚಿಸಿದೆ.
ರಾಜ್ಯದಲ್ಲಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ SATS ಸಂಖ್ಯೆ ಲಭ್ಯವಿರುತ್ತದೆ. ಈ ಅಭ್ಯರ್ಥಿಗಳನ್ನು ರೆಗ್ಯುಲರ್ ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದು. SATS ಸಂಖ್ಯೆ ಇಲ್ಲದ ಅಭ್ಯರ್ಥಿಗಳನ್ನು ಖಾಸಗಿ ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದು.
ಡ್ರಾಯಿಂಗ್ ಗ್ರೇಡ್ ಪರೀಕ್ಷೆ ತೆಗೆದುಕೊಳ್ಳಲು ಅಗತ್ಯವಿರುವ ಅರ್ಹತೆ:-
ಡ್ರಾಯಿಂಗ್ ಗ್ರೇಡ್ ಪರೀಕ್ಷೆ ತೆಗೆದುಕೊಳ್ಳಲು ರೆಗ್ಯುಲರ್ ಹಾಗೂ ಖಾಸಗಿ ಅಭ್ಯರ್ಥಿಗಳು 7ನೇ ತರಗತಿ ಉತ್ತೀರ್ಣರಾಗಿರಬೇಕು.ಪ್ರಸ್ತುತ 8, 9, 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ SATS ಸಂಖ್ಯೆ ಹೊಂದಿರುವ ಅಭ್ಯರ್ಥಿಗಳು ಶಾಲೆಯ ದಾಖಲಾತಿ ವಹಿಯ ಪ್ರಕಾರ ಸಾಟ್ಸ್ನಲ್ಲಿ ಅಪ್ ಡೇಟ್ ಮಾಡಿಸಿ ಪರೀಕ್ಷೆ ತೆಗೆದುಕೊಳ್ಳಬಹುದು.
ಖಾಸಗಿ ಅಭ್ಯರ್ಥಿಗಳು ಸಹ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ.ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಲೋಯರ್ ಮತ್ತು ಹೈಯರ್ ಎಂಬ ಎರಡು ಪರೀಕ್ಷೆಗಳಿರುತ್ತವೆ. ಅಭ್ಯರ್ಥಿಗಳು ಲೋಯರ್ ಗ್ರೇಡ್ ಪರೀಕ್ಷೆ ತೆಗೆದುಕೊಳ್ಳದೆಯೇ ನೇರವಾಗಿ ಹೈಯರ್ ಗ್ರೇಡ್ ಪರೀಕ್ಷೆ ತೆಗೆದುಕೊಳ್ಳಬಹುದು. ಆದರೆ ಎರಡೂ ಪರೀಕ್ಷೆಗಳನ್ನು ಒಂದೇ ಬಾರಿ ತೆಗೆದುಕೊಳ್ಳಲು ಅವಕಾಶವಿಲ್ಲ.
ಪರೀಕ್ಷೆಗೆ ಮಂಡಲಿಯಿಂದ ಅನುಮೋದಿಸಲ್ಪಟ್ಟ ಪರೀಕ್ಷಾ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಪ್ರತಿ ಕೇಂದ್ರದಲ್ಲೂ ಕನಿಷ್ಠ 100 ಅಭ್ಯರ್ಥಿಗಳಿರಬೇಕು. 100 ಅಭ್ಯರ್ಥಿಗಳಿಗಿಂತ ಕಡಿಮೆ ನೋಂದಾವಣೆಯಾದಲ್ಲಿ ಹತ್ತಿರದ ಬೇರೆ ಕೇಂದ್ರಕ್ಕೆ ಟ್ಯಾಗ್ ಮಾಡಲಾಗುವುದು.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದ್ದು, ಅರ್ಜಿ ಶುಲ್ಕ ಒಟ್ಟು ರೂ. 20-00ಗಳನ್ನು ಪಾವತಿಸಬೇಕಾಗಿರುತ್ತದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್ರವರು ನೀಡಿರುವ ಜಾತಿ/ಆದಾಯ ಪ್ರಮಾಣಪತ್ರದ ಜೆರಾಕ್ಸ್ ಪ್ರತಿಯನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪಡೆದು ದೃಢೀಕರಿಸಿ, ತಮ್ಮ ಅಧೀನದಲ್ಲಿಯೇ ಸಂರಕ್ಷಿಸಲು ತಿಳಿಸಿದೆ. ಯಾವುದೇ ಕಾರಣಕ್ಕೂ ಜಾತಿ/ಆದಾಯ ಪ್ರಮಾಣಪತ್ರಗಳನ್ನು ಮಂಡಲಿಗೆ ಕಳುಹಿಸುವಂತಿಲ್ಲ ಎಂದು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಸುತ್ತೋಲೆ ಓದಿ





