ಹುಬ್ಬಳ್ಳಿ: ವಿಮಾನದ ತುರ್ತು ಸಂದರ್ಭದ ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕನ ವಿರುದ್ಧ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹ ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಆರೋಪದ ಮೇಲೆ ಬೆಳಗಾವಿಯ ನಿರಂಜನ ಕರಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೆಪ್ಟೆಂಬರ್ 12ರಂದು ನಿರಂಜನ ಕರಗಿ ಹುಬ್ಬಳ್ಳಿಯಿಂದ ಪುಣೆಗೆ ಹೊರಡುವ ಇಂಡಿಗೋ ವಿಮಾನ ಹತ್ತಿದ್ದು, ಅವರು ಕುಳಿತುಕೊಂಡಿದ್ದ ಆಸನದ ಪಕ್ಕದಲ್ಲಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದಿದ್ದರು. ಈ ಮೂಲಕ ಅವರು ಸಹ ಪ್ರಯಾಣಿಕರ ಸುರಕ್ಷತೆಗೆ ಅಪಾಯವುಂಟು ಮಾಡಿದ್ದಾರೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಗೋಕುಲ ರಸ್ತೆ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.