ರಾಂಪುರ: ಮಹಿಳೆಯೊಬ್ಬರು ಕೋರ್ಟ್ ಆವರಣದಲ್ಲಿಯೇ ಗಂಡನಿಗೆ ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ರಾಂಪುರದಲ್ಲಿ ಕೋರ್ಟ್ ಆವರಣದಲ್ಲಿಯೇ ಮುಸ್ಲಿಂ ಮಹಿಳೆಯೊಬ್ಬರು ತನ್ನ ಪತಿಗೆ ಚಪ್ಪಲಿಯಿಂದ ಮನಬಂದಂತೆ ಹೊಡೆದಿದ್ದಾಳೆ. ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ ನ್ಯಾಯಾಲಯದ ಹೊರಗೆ ಮೂರು ಬಾರಿ ತಲಾಖ್ ಎಂದು ಉಚ್ಛರಿಸಿದ್ದಾನೆ. ಇದರಿಂದ ಕೋಪಗೊಂಡು ಆತನಿಗೆ ಹೊಡೆದಿದ್ದಾಗಿ ಮಹಿಳೆ ತಿಳಿಸಿದ್ದಾಳೆ.
2018ರಲ್ಲಿ ತಾನು ವಿವಾಹವಾಗಿದ್ದೆ. ಮದುವೆಯಾದ ಕೆಲ ದಿನಗಳಲ್ಲೇ ಪತಿ ತನ್ನ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಇಬ್ಬರು ಹೆಣ್ಣುಮಕ್ಕಳಾದ ಬಳಿಕ ಮನೆಯಿಂದಲೇ ಹೊರ ಹಾಕಿದ್ದಾನೆ. ಬೇರೆದಾರಿಯಿಲ್ಲದೇ ಜೀವನಾಂಶಕ್ಕಾಗಿ ನಾನು ಅರ್ಜಿಸಲ್ಲಿಸಿದ್ದೆ. ಆಗ ಮಕ್ಕಳಿಬ್ಬರನ್ನು ಕರೆದುಕೊಂಡು ಹೋಗಿದ್ದಾನೆ. ಕೋರ್ಟ್ ಸಹಾಯ ಪಡೆಯುವುದು, ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಕೋರ್ಟ್ ಮೊರೆ ಹೋಗಿದ್ದೆ ಎಂದು ತಿಳಿಸಿದ್ದಾರೆ.
ಮಹಿಳೆ ಕೋರ್ಟ್ ನಿಂದ ಹೊರಬರುತ್ತಿದ್ದಂತೆ ಆಕೆಯ ಪತಿ ಹಾಗೂ ಮಾವ ಹಿಂಬಾಲಿಸಿಕೊಂಡು ಬಂದಿದ್ದಲ್ಲದೇ ನಿಂದಿಸಿದ್ದರು. ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದರು. ಬಳಿಕ ಮೂರು ಬಾರಿ ತಲಾಖ್ ಎಂದು ಗಂಡ ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಕೋರ್ಟ್ ಆವರಣ ಎಂಬುದನ್ನೂ ನೋಡದೇ ಪತಿಯ ಕಾಲರ್ ಪಟ್ಟಿ ಹಿಡಿದು ಚಪ್ಪಲಿಯಿಂದ ಬಾರಿಸಿದ್ದಾಳೆ.