ಬೆಂಗಳೂರು: ಕರ್ನಾಟಕದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಚೀಟಿಗಳಿವೆ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಇಂತಹ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡುವಂತೆ ಸೂಚನೆ ನೀಡಲಾಗಿದೆ. ಕೇಂದ್ರದ ಸೂಚನೆ ಅನ್ವಯ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಸೆಪ್ಟೆಂಬರ್ 15ರಂದು ಈ ಬಗ್ಗೆ ಸಭೆ ನಡೆಸಲಿದ್ದು, ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಗುರುತಿಸಿದ್ದ ಅನರ್ಹ ಪಡಿತರ ಚೀಟಿಗಳನ್ನು ಕೂಡ ರದ್ದು ಪಡಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಸರ್ಕಾರದ ಮಾನದಂಡ ಅನ್ವಯ 1.20 ಲಕ್ಷ ರೂ. ಗಿಂತ ಹೆಚ್ಚು ವಾರ್ಷಿಕ ಆದಾಯ ಇರುವ ಬಿಪಿಎಲ್ ಕಾರ್ಡು ಹೊಂದಿದವರು ಅನರ್ಹರು. ರಾಜ್ಯದಲ್ಲಿ ಅಂತಹ 5.80 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ಗುರುತಿಸಿದೆ. ರಾಜ್ಯ ಸರ್ಕಾರದ ಕುಟುಂಬ ತಂತ್ರಾಂಶ ಗುರುತಿಸಿದ ಪ್ರಕಾರ ಅಂತಹ 10.09 ಲಕ್ಷ ಫಲಾನುಭವಿಗಳಿದ್ದಾರೆ.
ಈಗ ಕೇಂದ್ರದ ಸೂಚನೆಯಂತೆ ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಮಾನದಂಡ, ನಿಯಮ ಮೀರಿ ಬಿಪಿಎಲ್ ಕಾರ್ಡ್ ಹೊಂದಿದವರು ಅನರ್ಹರೆಂದು ಗುರುತಿಸಿ ಅಂತವರ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತಿಸಲಾಗುವುದು. ರಾಜ್ಯದಲ್ಲಿ 1.53 ಕೋಟಿ ಪಡಿತರ ಚೀಟಿಗಳಿದ್ದು, 5,41,44,507 ಸದಸ್ಯರಿದ್ದಾರೆ.