ಬೆಳಗಾವಿ: ಕೆಲವು ದಿನಗಳ ಹಿಂದೆಯಷ್ಟೇ ಕೆಜಿಗೆ 30 ರಿಂದ 40 ರೂಪಾಯಿ ಇದ್ದ ಟೊಮೆಟೊ ದರ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲವು ದಿನಗಳಿಂದ ಭಾರಿ ಬೇಡಿಕೆಯಲ್ಲಿದ್ದ ಟೊಮೊಟೊ ಬೆಳೆಯನ್ನು ಹೆಚ್ಚಿನ ರೈತರು ಬೆಳೆದಿದ್ದು, ನಿರೀಕ್ಷಿತ ಬೆಲೆ ಸಿಗದ ಕಾರಣ ಸಂಕಷ್ಟ ಎದುರಾಗಿದೆ. ಪ್ರತಿ ಕೆಜಿಗೆ 30 ರಿಂದ 40 ರೂ.ವರೆಗೆ ಮಾರಾಟವಾಗುತ್ತಿದ್ದ ಟೊಮೆಟೊ ದರ ಪ್ರಸ್ತುತ ಕೆಜಿಗೆ 10 ರಿಂದ 15 ರೂ.ಗೆ ಇಳಿದಿದೆ. 15 ಕೆಜಿ ಒಂದು ಬಾಕ್ಸ್ ಗೆ 100 ರಿಂದ 200 ರೂ.ಗೆ ಮಾರಾಟವಾಗುತ್ತಿದೆ.
ಹೊರ ರಾಜ್ಯಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆದಿರುವುದರಿಂದ ರಾಜ್ಯದಿಂದ ಹಣ್ಣು ರವಾನೆಯಾಗುತ್ತಿಲ್ಲ. ಬಿಸಿಲ ವಾತಾವರಣದಿಂದ ಕಾಯಿಗಳು ಬೇಗನೆ ಹಣ್ಣಾಗುತ್ತಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದೆ. ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿದಿದೆ ಎಂದು ಹೇಳಲಾಗಿದೆ.