ವಿಶಾಖಪಟ್ಟಣ: 14 ಕೋಟಿ ಸದಸ್ಯರನ್ನು ಹೊಂದಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
14 ಕೋಟಿ ಸದಸ್ಯರಲ್ಲಿ, ಎರಡು ಕೋಟಿ ಸದಸ್ಯರು ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆಗಿರುವ ನಡ್ಡಾ ಹೇಳಿಕೆ ನೀಡಿದ್ದಾರೆ.
ನಾವು 14 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ. ಭಾರತದಲ್ಲಿ, ನಾವು 20 ರಾಜ್ಯಗಳಲ್ಲಿ ಎನ್ಡಿಎ ಸರ್ಕಾರಗಳನ್ನು ಮತ್ತು 13 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳನ್ನು ಹೊಂದಿದ್ದೇವೆ. ನಾವು ದೇಶದಲ್ಲಿ ಅತಿದೊಡ್ಡ ಪ್ರತಿನಿಧಿ ಪಕ್ಷ. ನಮಗೆ 240 ಸಂಸದರು(ಲೋಕಸಭೆ) ಇದ್ದಾರೆ. ನಮ್ಮಲ್ಲಿ ಸುಮಾರು 1,500 ಶಾಸಕರಿದ್ದಾರೆ. ನಮ್ಮಲ್ಲಿ 170 ಕ್ಕೂ ಹೆಚ್ಚು ಎಂಎಲ್‌ಸಿಗಳಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನಾಯಕತ್ವವನ್ನು ಶ್ಲಾಘಿಸಿದ ನಡ್ಡಾ ಅವರು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಆಡಳಿತವನ್ನು “ಜವಾಬ್ದಾರಿಯುತ ಮತ್ತು ಸ್ಪಂದಿಸುವ” ಆಡಳಿತ ಎಂದು ಕರೆದರು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕಳೆದ 11 ವರ್ಷಗಳಲ್ಲಿ, ಕಾರ್ಯಕ್ಷಮತೆಯ ರಾಜಕೀಯ ಮತ್ತು ಜವಾಬ್ದಾರಿಯುತ ಸರ್ಕಾರವಿದೆ ಎಂದು ನಡ್ಡಾ ಹೇಳಿದ್ದಾರೆ.