ಮಂಡ್ಯ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಆಕೆಯ ಪತಿ ಮತ್ತು ಕುಟುಂಬದವರು ನಾಪತ್ತೆಯಾಗಿದ್ದಾರೆ. ಮಹಿಳೆಯ ಪತಿ ಮನೆಯ ಮುಂದೆ ಶವ ಇಟ್ಟು ಪೋಷಕರು ಪ್ರತಿಭಟನೆ ನಡೆಸಿದ್ದು, ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯ 26 ವರ್ಷದ ಹರ್ಷಿತಾ ಮೃತಪಟ್ಟ ಮಹಿಳೆ. ಎಂಟು ವರ್ಷದ ಹಿಂದೆ ನಂದೀಶ್ ಜೊತೆಗೆ ಹರ್ಷಿತಾ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಂಡ್ಯ ತಾಲೂಕಿನ ದೊಡ್ಡಿ ಗ್ರಾಮದಲ್ಲಿ ನಂದೀಶ್ ಹರ್ಷಿತಾ ವಾಸವಾಗಿದ್ದರು. ಎರಡು ವರ್ಷದಿಂದ ಪತ್ನಿಗೆ ನಂದೀಶ್ ಕಿರುಕುಳ ನೀಡುತ್ತಿದ್ದ. ಹಿರಿಯರು ಪಂಚಾಯಿತಿ ನಡೆಸಿ ರಾಜೀ ಮಾಡಿಸಿದ್ದರು. ಈಗ ಪತಿ ಮತ್ತು ಆತನ ಮನೆಯವರು ನಮ್ಮ ಮಗಳನ್ನು ಕೊಂದು ನೇಣು ಹಾಕಿದ್ದಾರೆ ಎಂದು ಹರ್ಷಿತಾ ಪೋಷಕರು ದೂರು ನೀಡಿದ್ದಾರೆ.
ನಂದೀಶ್ ಮನೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದು, ನಂದೀಶ್ ಮತ್ತು ಆತನ ಕುಟುಂಬದವರು ಬರಬೇಕು. ಇಲ್ಲದಿದ್ದರೆ ಇಲ್ಲೇ ಅಂತ್ಯಸಂಸ್ಕಾರ ಮಾಡುವುದಾಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರ ಮನವೊಲಿಸಲು ಗ್ರಾಮದ ಹಿರಿಯರು ಮುಂದಾಗಿದ್ದು, ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.