ದಾವಣಗೆರೆ: ಅನಧಿಕೃತ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಿ ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ದಾವಣಗೆರೆಯ ಪರಿವೀಕ್ಷಣಾ ಮಂದಿರದಲ್ಲಿ ಶನಿವಾರ ಜಿಲ್ಲಾಮಟ್ಟದ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಅನರ್ಹರ ಪಡಿತರ ಕಾರ್ಡ್ ಗಳನ್ನು ಪತ್ತೆ ಮಾಡಿ ಅರ್ಹರಿಗೆ ಹೊಸ ಕಾರ್ಡ್ ಗಳನ್ನು ನೀಡಲಾಗುವುದು. ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ತೂಕ ಮತ್ತು ಅಳತೆಯ ಗುಣಮಟ್ಟ ಕಾಪಾಡುವಲ್ಲಿ ಗಮನಹರಿಸಬೇಕು. ಅಂಗಡಿಗಳಲ್ಲಿ ತೂಕದ ಯಂತ್ರಗಳನ್ನು ತಪಾಸಣೆ ಮಾಡಿ, ಸತ್ಯಾಪಣ ಮತ್ತು ಮುದ್ರೆ ಮಾಡಿ ಪ್ರಮಾಣ ಪತ್ರ ವಿತರಿಸಬೇಕು. ಪೆಟ್ರೋಲ್ ಬಂಕ್ಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಮೋಸವಾಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.