ಕಾರವಾರ: ಗೇರುಸೊಪ್ಪ ವಿದ್ಯುತ್ ಉತ್ಪಾಅದನಾ ಘಟಕದ ಬಳಿಯೇ ಭೂಕುಸಿತ ಸಂಭವಿಸಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಮತ್ತೆ ಮತ್ತೆ ಭೂಕುಸಿತ ಸಂಭವಿಸುತ್ತಿದ್ದು, ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ವಿದ್ಯುತ್ ಉತ್ಪಾದನಾ ಘಟಕದ ಬಳಿ ಭೂಕುಸಿತ ಸಂಭವಿಸಿದ್ದು, ಭಾರಿ ಪ್ರಮಾಣದ ಮಣ್ಣು, ಮರ-ಗಿಡಗಳು ಧರಾಶಾಹಿಯಾಗಿವೆ.
ಭಾರಿ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ ಜಲಾಶಯದಿಂದ 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದರಿಂದಾಗಿ ಜಲಾಶಯದ ತಡೆಗೋಡೆ ಬಳಿಯೇ ಒಂದು ಭಾಗದ ಧರೆ ಕುಸಿದಿದೆ.
ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾದಲ್ಲಿ ಡ್ಯಾಂ ನ ತಡೆಗೋಡೆವರೆಗೂ ಕುಸಿಯುವ ಸಾಧ್ಯತೆ ಇದೆ. ಡ್ಯಾಂನ ಎಡಭಾಗದ ಧರೆ ಕುಸಿದಿರುವುದರಿಂದ ಜಲಾಶಯಕ್ಕೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.