ಹೊಸಪೇಟೆ: 10 ಸಾವಿರ ರೂಪಾಯಿಗೆ ನವಜಾತ ಶಿಶುವನ್ನೇ ಮಾರಾಟ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆಶಾ ಕಾರ್ಯಕರ್ತೆಯರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇತೆಯ ಕಮಲಾಪುರ ಗ್ರಾಮದ ಮಹಿಳೆಯೊಬ್ಬರು ಆಗಸ್ಟ್ 26ರಂದು ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಐದು ದಿನಗಳ ಬಳಿಕ ಶಿಶುವನ್ನು ಹಗರಿಬೊಮ್ಮನಹಳ್ಳಿ ನಿವಾಸಿ ಕರಿಬಸಪ್ಪ ಎಬಾತನಿಗೆ ಮಾರಾಟ ಮಾಡಲಾಗಿತ್ತು.
ಮಕ್ಕಳ ಸಹಾಯವಾಣಿಗೆ ಬಂದ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಚಿದಾನಂದ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಅವರಲ್ಲಿ ಇಬ್ಬರು ಕವಿತಾ ಹಾಗೂ ನಾಗರತ್ನಾ ಎಂಬ ಆಶಾ ಕಾರ್ಯಕರ್ತಯರು ಸೇರಿದ್ದಾರೆ. ಇಬ್ಬರೂ ಬಾಣಂತಿಯ ಮನವೊಲಿಸಿ ಶಿಶು ಮಾರಾಟ ಮಾಡಿಸಿ ಹಣ ನೀಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.