ಹಾಸನ: ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಟ್ರಕ್ ಹರಿದು 9 ಜನರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್ ಐ ಓರ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಟ್ರಕ್ ಬೈಕ್ ಗೆ ಡಿಕ್ಕಿಯಾಗುವ ಕೆಲವೇ ಸೆಕೆಂಡುಗಳ ಹಿಂದೆ ಪಿಎಸ್ ಐ ಧನರಾಜ್ ಸ್ಥಳದಿಂದ ತೆರಳಿದ್ದರು. ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದರು. ಅವರು ತೆರಳಿದ ಎರಡೇ ಸೆಕೆಂಡ್ ನಲ್ಲಿ ಶರವೇಗದಲ್ಲಿ ಬಂದ ಟ್ರಕ್ ಬೈಕ್ ಗೆ ಡಿಕ್ಕಿಯಾಗಿದೆ. ಬಳಿಕ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಹರಿದಿದೆ.
ಭೀಕರ ದಿರಂತದಲ್ಲಿ ಪಿಎಸ್ ಐ ಧನರಾಜ್ ಕ್ಷಣಾರ್ಧದಲ್ಲಿ ಬಚಾವ್ ಆಗಿದ್ದಾರೆ. ಹಾಸನ ಜಿಲ್ಲೆಯ ಗೊರೂರು ಠಾಣೆಯ ಪಿರೆಸ್ ಐ ಧನರಾಜ್ ಗಣೇಶೋತ್ಸವ ಮೆರವಣಿಗೆ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದರು. ಒಂದು ಮಾರ್ಗದಲ್ಲಿ ಮೆರವಣಿಗೆ ಸಾಗುತ್ತಿತ್ತು. ಮತ್ತೊಂದು ಮಾರ್ಗವನ್ನು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ವಾಹನಗಳನ್ನು ಕಳುಹಿಸಿ ಪಿಎಸ್ ಐ ಧನರಾಜ್ ರಸ್ತೆಯಲ್ಲಿ ಮುಂದೆ ಸಾಗಿದ್ದರು. ಈ ವೇಳೆ ಕ್ಷಣಮಾತ್ರದಲ್ಲಿ ಬಂದ ಟ್ರಕ್ ಬೈಕ್ ಗೆ ಡಿಕ್ಕಿ ಹೊಡೆದು ಜನರ ಮೇಲೆ ಹರಿದಿದೆ. ಪಿಎಸ್ ಐ ಕಣ್ಣೆದುರೇ ಘೋರ ದುರಂತ ಸಂಭವಿಸಿದೆ.