ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಉದ್ವಿಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ.
ಮದ್ದೂರು ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ಸ್ಥಳದಲ್ಲಿ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಕರ್ತವ್ಯಲೋಪ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದೇ ವೇಳೆ ಮಂಡ್ಯ ಹೆಚ್ಚುವರಿ ಎಸ್ ಪಿ ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯೋಜನೆ ಮಾಡದೇ ತಿಮ್ಮಯ್ಯ ಅವರ ಗೃಹ ಇಲಾಖೆ ದಿಢೀರ್ ವರ್ಗಾವಣೆ ಮಾಡಿದ್ದು, ಎ ಎಸ್ ಪಿ ತಿಮ್ಮಯ್ಯ ಸ್ಥಾನಕ್ಕೆ ನವೀನ್ ಕುಮಾರ್ ಅವರನ್ನು ನೇಮಕ ಮಾಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಮಂಡ್ಯ ಜಿಲ್ಲೆಯ ಮದ್ದೂರು ಕೇಸ್ ನಲ್ಲಿ ಆಂತರಿಕ ಭದ್ರತಾ ಲೋಪ ಕಂಡುಬಂದಿದೆ. ಇದನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.