ಉಡುಪಿ: ಪಾಗಲ್ ಪ್ರೇಮಿಯೊಬ್ಬ ಹುಟ್ಟುಹಬ್ಬದ ದಿನವೇ ಯುವತಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಇಲ್ಲಿನ ಕೊಕ್ಕರ್ಣೆ ಗ್ರಾಮದಲ್ಲಿ ಪಕ್ಕದ ಮನೆಯ ಯುವಕನೇ ಯುವತಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ರಕ್ಷಿತಾ ಪೂಜಾರಿ (24) ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ತಿಕ್ ಯುವತಿಗೆ ಚಾಕು ಇರಿದಿರುವ ಆರೋಪಿ.
ಗಾಯಾಳು ರಕ್ಷಿತಾಳನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಕೆಲ ದಿನಗಳ ಹಿಂದೆ ಮದುವೆ ಬಗ್ಗೆ ರಕ್ಷಿತಾ ಮನೆಯವರ ಮುಂದೆಯೂ ಕಾರ್ತಿಕ್ ಪ್ರಸ್ತಾಪಿಸಿದ್ದ. ಆದಾಗ್ಯೂ ಕುಟುಂಬದವರು ಒಪ್ಪಿರಲಿಲ್ಲ. ಮದುವೆಗೆ ಆಕ್ಷೇಪ ಬಂದ ಕಾರಣ ರಕ್ಷಿತಾ, ಕಾರ್ತಿಕ್ ನಂಬರ್ ನ್ನು ಬ್ಲಾಕ್ ಮಾಡಿದ್ದಳು. ಇಂದು ರಕ್ಷಿತಾ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಶುಭಕೋರಲೆಂದು ಮನೆಗೆ ಬಂದ ಕಾರ್ತಿಕ್ ಗೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಕಾರ್ತಿಕ್ ಏಕಾಏಕಿ ಆಕೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.