ಧಾರವಾಡ: ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಕೆಲವರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ನೀರು ಕುಡಿದು ಅನಾರೋಗ್ಯವಾಗಿದೆ ಎಂದು ಹೇಳಲಾಗಿತ್ತು. ತಕ್ಷಣ ನವಲಗುಂದ ತಾಲೂಕು ಆಸ್ಪತ್ರೆಗೆ ವಾಂತಿ ಬೇಧಿ ಪೀಡಿತರನ್ನು ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ನವಲಗುಂದ ವಿಧಾನಸಭಾ ಮತಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ ಹಾಗೂ ಎಸ್.ಪಿ. ಗುಂಜನ್ ಆರ್ಯ ಅವರು ನವಲಗುಂದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರನ್ನು ಮಾತನಾಡಿಸಿ, ಘಟನೆ ಬಗ್ಗೆ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಶಾಸಕ ಎನ್.ಹೆಚ್.ಕೋನರಡ್ಡಿ ಮಾತನಾಡಿ, ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಬೇಕು. ಸ್ವಚ್ಛತೆ, ಶುದ್ಧ ನೀರಿನ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಆಸ್ಪತ್ರೆಗೆ ದಾಖಲಾಗಿರುವವರಿಗೆ ಉತ್ತಮ ಚಿಕಿತ್ಸೆ, ಉಚಿತ ಔಷಧಿ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸುಮಾರು 19 ಜನ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಗ್ರಾಮಸ್ಥರು ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ಈ ಘಟನೆ ಆಗಿದೆ ಎಂದು ದೂರಿದ್ದಾರೆ. ಈ ಕುರಿತು ಪರಿಶೀಲಿಸಿ, ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅವರಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಗ್ರಾಮದ ಕೆರೆ, ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು ಮನೆಹತ್ತಿರದ ನಳದಿಂದ ನೀರು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ನೀರು, ನೈರ್ಮಲ್ಯ, ನೀರನ್ನು ಶುದ್ಧೀಕರಿಸಿ, ಬಳಸುವ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯ ತಪಾಸಣೆಗಾಗಿ 30 ಜನ ಆಶಾ ಸದಸ್ಯರ ತಂಡ ರಚಿಸಿ, ಮನೆಮನೆ ಸಮೀಕ್ಷೆ ಆರಂಭಿಸಲಾಗಿದೆ. ಗುಡಿಸಾಗರ ಗ್ರಾಮದಲ್ಲಿ ಸುಮಾರು 1,600 ಮನೆ, ಅಂದಾಜು 2,500 ಜನಸಂಖ್ಯೆ ಇದ್ದು, ನಿನ್ನೆ ಮತ್ತು ಇವತ್ತು ಸೇರಿ 600 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಮಾಡಿ ಕುಟುಂಬಗಳ ಆರೋಗ್ಯ ಮಾಹಿತಿ ಸಂಗ್ರಹಿಸಲಾಗಿದೆ. ಗುಡಿಸಾಗರ ಆರೋಗ್ಯ ಇಲಾಖೆ ಉಪಕೇಂದ್ರಕ್ಕೆ ತಜ್ಞ ವೈದ್ಯರನ್ನು, ಶುಶ್ರೂಷಕಿಯರನ್ನು ನೇಮಿಸಲಾಗಿದ್ದು, ಗ್ರಾಮಸ್ಥರಿಗೆ ಸ್ಥಳದಲ್ಲಿ ಅಗತ್ಯ ಚಿಕಿತ್ಸೆ ನೀಡಿ, ಔಷಧಿ ವಿತರಿಸಲಾಗುತ್ತದೆ. ನೀರಿನ ಪರೀಕ್ಷಾ ವರದಿ ಬಂದ ತಕ್ಷಣ, ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ನವಲಗುಂದ ತಹಶೀಲ್ದಾರ ಸುಧೀರ ಸಾಹುಕಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ.ಹೊನಕೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ತಾಲೂಕು ವೈದ್ಯಾಧಿಕಾರಿ ಡಾ.ಕರ್ಲವಾಡ, ಗುಡಿಸಾರ ಗ್ರಾಮಪಂಚಾಯತ ಅಧ್ಯಕ್ಷೆ ರತ್ನಮ್ಮ ಗುಡಿಸಲಮನಿ, ಪಿಡಿಓ ಎಸ್.ಎಂ. ಹೂಗಾರ ಸೇರಿದಂತೆ ಇತರರು ಇದ್ದರು.