ಬೆಂಗಳೂರು: ಎಸ್ ಸಿ ಒಳಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ಒಳ ಮೀಸಲಾತಿ ವಿಚಾರವಾಗಿ ಮಾತುಕತೆಯ ಬಗ್ಗೆ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಎಸ್ ಸಿ ಒಳ ಮೀಸಲಾತಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಬಂಜಾರ, ಭೋವಿ, ಕೊರಚಿ, ಕೊರಮ ಸಮುದಾಯದವರು ಪಿ.ರಾಜೀವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ವಿಧಾನಸೌಧ ಮುತ್ತಿಗೆಹಾಕುವತ್ತ ಮುನ್ನುಗ್ಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು. ಈ ವೇಳೆ ಪಿ.ರಾಜೀವ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಪಿ.ರಾಜೀವ್ ಹಾಗೂ ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿ ಮನವೊಲಿಕೆ ಮಾಡಲಾಗಿದ್ದು, ಪ್ರತಿಭಟನೆ ಹಿಂಪಡೆಯಲಾಗಿದೆ. ಪ್ರತಿಭಟನಾಕಾರರು ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ವಾರದೊಳಗೆ ಸರ್ಕಾರ ಮೀಸಲಾತಿ ಘೋಷಣೆ ಬಗ್ಗೆ ಚರ್ಚಿಸದಿದ್ದರೆ ಉಗ್ರಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.