ಮಂಡ್ಯ: ಬಿಜೆಪಿ ನಾಯಕರಿಗೆ ಕೆಲಸವಿಲ್ಲ, ಕೋಮು ಭಾವನೆಗಳನ್ನು ಕೆರಳಿಸಿ, ಬೆಂಕಿ ಹಚ್ಚುವುದೇ ಅವರ ಕೆಲಸ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ. ಕೆಲಸವಿರುವ ನೀವು ಏನು ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಅಶ್ವತ್ಥನಾರಾಯಣ, ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸ್ ಇಲಾಖೆ, ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದನ್ನು ಖಂಡಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ನಮ್ಮನ್ನು ಕೆಲಸವಿಲ್ಲದವರು ಎನ್ನುತ್ತಿದ್ದಾರೆ. ನಮಗೆ ಕೆಲಸವಿಲ್ಲ ನಿಜ. ಕೆಲಸವಿರುವ ನೀವು ಏನು ಮಾಡ್ತೀದೀರಾ? ಮಸಾಲೆ ದೋಸೆ ತಿಂತಿದ್ದೀರಾ? ಕಪ್ ಗೆ ಮುತ್ತಿಡುವ ಕೆಲಸ ಮಾಡುತ್ತಿದ್ದೀರಾ? ಎಂದು ಕಿಡಿಕಾರಿದರು.
ಕೆಲಸವಿರುವ ಸರ್ಕಾರದ ನಾಯಕರು, ಸಚಿವರು ಎಲ್ಲಿಗೆ ಹೋಗಿದ್ದೀರಾ? ಒಬ್ಬನೇ ಒಬ್ಬ ಸಚಿವರು, ಶಾಸಕರು ಮದ್ದೂರಿಗೆ ಬಂದು ಜನರ ಸಂಕಷ್ಟ ಆಲಿಸಿಲ್ಲ ಎಲ್ಲಿದ್ದೀರಾ? ಈ ಸರ್ಕಾರ ಸತ್ತು ಹೋಗಿದೆಯಾ? ಬದುಕಿದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ಪ್ರೀತಿಗಾದರೂ ಗೌರವ ಕೊಡುವುದು ಬೇಡವೇ? ಬಹುಮತದಿಂದ ಜನರು ನಿಮ್ಮ ಸರ್ಕಾರ ತಂದು ನಿಮಗೆ ಆಡಳಿತಕೊಟ್ಟಿದ್ದಾರಾರೆ. ಅದಕ್ಕಾಗಿಯಾದರೂ ಗೌರವಿಸಿ ಚನ್ನಾಗಿ ಆಡಳಿತ ನಡೆಸಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅದನ್ನು ಮೊದಲು ಸರಿಪಡಿಸಿ. ಕೆಲಸವಿರುವ ನೀವು ಏನಾದರೂ ಮಾಡಿ ಎಂದು ಗುಡುಗಿದ್ದಾರೆ.