ನವದೆಹಲಿ: ಜಗದೀಪ್ ಧನಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಲಿದೆ.
ಲೋಕಸಭೆ, ರಾಜ್ಯಸಭೆ ಬಲಾಬಲ ಗಮನಿಸಿ ವಿಪಕ್ಷದ ಸುದರ್ಶನ್ ರೆಡ್ಡಿ ವಿರುದ್ಧ ಎನ್.ಡಿ.ಎ. ಅಭ್ಯರ್ಥಿ ರಾಧಾಕೃಷ್ಣನ್ ಆಯ್ಕೆಯಾಗುವುದು ಖಚಿತವಾಗಿದ್ದು, ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.
ದೇಶದ ಎರಡನೇ ಅತ್ಯುನ್ನತ ಹುದ್ದೆಗೆ ಇಂದು ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10 ಗಂಟೆಗೆ ಮತ ಹಾಕಲಿದ್ದಾರೆ. ಈ ಚುನಾವಣೆಯಲ್ಲಿ ಜನಸಾಮಾನ್ಯರು ನೇರವಾಗಿ ಮತದಾನ ಮಾಡುವುದಿಲ್ಲ. ಅವರು ಆಯ್ಕೆ ಮಾಡಿದ ಸಂಸದರು ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ.
ಲೋಕಸಭೆಯ 543 ರಾಜ್ಯಸಭೆಯ 245 ಸದಸ್ಯರು ಸೇರಿ 788 ಸಂಸದರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಇವರನ್ನು ಎಲೆಕ್ಟ್ರೋರಲ್ ಕಾಲೇಜ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಒಂದು ರಾಜ್ಯಸಭೆಯಲ್ಲಿ ಆರು ಸ್ಥಾನಗಳು ಖಾಲಿಯಿದ್ದು 781 ಸಂಸದರು ಮತ ಚಲಾಯಿಸಲಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ಗೌಪ್ಯ ಮತದಾನ ನಡೆಯಲಿದ್ದು, ಸಂಸದರು ಯಾವ ಅಭ್ಯರ್ಥಿಗೆ ಬೇಕಾದರೂ ಮತ ಹಾಕಬಹುದು. ಅಭ್ಯರ್ಥಿಗಳ ಹೆಸರಿನ ಮುಂದೆ 1 ಎಂದು ಬರೆಯುವ ಮೂಲಕ ಸಂಸದರು ಮತ ಚಲಾಯಿಸಲಿದ್ದಾರೆ. ಆಡಳಿತ ಮತ್ತು ವಿಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಸರಳ ಬಹುಮತ ಪಡೆದವರು ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ. ವಿಜೇತರಾಗಲು ಕನಿಷ್ಠ 391 ಮತಗಳ ಅಗತ್ಯವಿದೆ. ಇಂದೇ ಮತ ಎಣಿಕೆ ನಡೆದು ವಿಜೇತರ ಘೋಷಣೆಯಾಗಲಿದೆ. ಎನ್.ಡಿ.ಎ. ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್, ಇಂಡಿಯಾ ಕೂಟದ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಸ್ಪರ್ಧಿಸಿದ್ದು, ಇವತ್ತೇ ಫಲಿತಾಂಶ ಪ್ರಕಟವಾಗಲಿದೆ.