ಬೆಂಗಳೂರು: ಕುಡಿದು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದವನ ವಿರುದ್ಧ ದೂರು ನೀಡುತ್ತಿದ್ದಂತೆ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆ ಕಸ್ತೂರಬಾ ನಗರದಲ್ಲಿ ನಡೆದಿದೆ.
ದಿವ್ಯತೇಜ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಿಷಿತೇಜ್ ಹಲ್ಲೆಗೊಳಗಾದ ವ್ಯಕ್ತಿ. ದಿವ್ಯತೇಜ್ ಹಾಗೂ ರಿಷಿ ತೇಜ್ ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ನಶೆಯಲ್ಲಿ ದಿವ್ಯ ತೇಜ್ ಬೀಯರ್ ಬಾಟಲ್ ನಿಂದ ರಿಷಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಕ್ತಸಿಕ್ತನಾಗಿ ಬಿದ್ದಿದ್ದ ರಿಷಿಗೆ ದಿವ್ಯತೇಜ್ ಹೊಸಬಟ್ಟೆ ತಂದು ಕೊಟ್ಟಿದ್ದ. ಆತ ಕೊಟ್ಟ ಬಟ್ಟೆ ಧರಿಸಿ ರಿಷಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ.
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಹೆದರಿದ ದಿವ್ಯತೇಜ್, ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಿಷಿ ದೂರು ಆಧರಿಸಿ ಪೊಲೀಸರು ಮನೆ ಬಳಿ ಬಂದು ಪರುಶೀಲಿಸಿದಾಗ ದಿವ್ಯತೇಜ್ ನೇಣಿಗೆ ಕೊರಳೊಡ್ಡಿರುವುದು ಗೊತ್ತಾಗಿದೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.