ಮಂಡ್ಯ: ನಿಶ್ಚಿತಾರ್ಥವಾಗಿ ಮದುವೆ ರದ್ದಾಗಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.
ವಳಗೆರೆಮೆಣಸ ಗ್ರಾಮದ ಕಾವ್ಯಾ(26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಿಕ್ಕೇರಿಯ ರೈತ ಸಂಪರ್ಕ ಕೇಂದ್ರದಲ್ಲಿ ಕಾವ್ಯಾ ಕೆಲಸ ಮಾಡುತ್ತಿದ್ದರು. 15 ದಿನದ ಹಿಂದೆ ಹಾಸನದ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು. ಹುಡುಗ ಪದವೀಧರನಾಗಿದ್ದು ಉದ್ಯೋಗದಲ್ಲಿದ್ದಾನೆ ಎಂದು ಸುಳ್ಳು ಹೇಳಿ ಆತನ ಮನೆಯವರು ಮದುವೆ ಮಾಡಿಸಲು ಮುಂದಾಗಿದ್ದರು. ಆ ವಿಷಯ ಗೊತ್ತಾಗಿ ಹುಡುಗಿ ಕಾವ್ಯಾ ಮನೆಯವರು ಮದುವೆಯನ್ನು ರದ್ದು ಮಾಡಿದ್ದರು.
ಇದರಿಂದ ಮನನೊಂದ ಕಾವ್ಯಾ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಗುರುವಾರ ಬೆಳಿಗ್ಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.