ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು ಯುವಕ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ನಡೆದಿದೆ.
ಕಳಸದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಯುವತಿಗೆ ಶುಕ್ರವಾರ ಮಧ್ಯಾಹ್ನ ಆರೋಪಿ ಜಯಪುರ ಮೂಲದ ಮೋಹನ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗುಡ್ಡೆತೋಟದವರಾಗಿರುವ ಯುವತಿ ಮತ್ತು ಮೋಹನ್ ಪರಸ್ಪರ ಪರಿಚಿತರಾಗಿದ್ದು, ಕೆಲವು ದಿನಗಳಿಂದ ಮೋಹನ್ ಪ್ರೇಮ ಪ್ರಸ್ತಾಪವನ್ನು ಯುವತಿ ನಿರಾಕರಿಸಿದ್ದು, ಆತನ ಮೊಬೈಲ್ ನಂಬರ್ ಅನ್ನು ಬ್ಲಾಕ್ ಲಿಸ್ಟ್ ಗೆ ಹಾಕಿದ್ದರು ಎನ್ನಲಾಗಿದೆ.
ಆಸ್ಪತ್ರೆಯ ಮುಂಭಾಗ ಮಹಾವೀರ ರಸ್ತೆಯ ನಡುವಿನ ಓಣಿಯಲ್ಲಿ ಶುಕ್ರವಾರ ಯುವತಿ ಹೋಗುತ್ತಿದ್ದಾಗ ಸಮೀಪಕ್ಕೆ ಬಂದ ಮೋಹನ್ ಏಕಾಏಕಿ ಯುವತಿಯ ತಲೆ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಯುವತಿಯನ್ನು ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.