ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಲ್ಲಿ ವಸತಿ ಶಾಲೆಯಲ್ಲಿದ್ದ ಬಾಲಕಿಯನ್ನು ತಾನು ಅವಳ ಚಿಕ್ಕಪ್ಪ ಎಂದು ಕಥೆ ಕಟ್ಟಿ ಹಾಸ್ಟೆಲ್ ನಿಂದ ಹೊರಗೆ ಕರೆದುಕೊಂಡು ಹೋಗಿ ಆಂಧ್ರಪ್ರದೇಶದ ತಿರುಪತಿಯಲ್ಲಿ ಮದುವೆ ಮಾಡಿಕೊಂಡಿದ್ದ ಅನ್ಯಧರ್ಮೀಯ ಯುವಕ ಜೈಲು ಪಾಲಾಗಿದ್ದಾನೆ.
ಬಾಲಕಿಯೊಂದಿಗೆ ಹೈದರಾಬಾದ್ ನ ರೂಂಬಲ್ಲಿದ್ದ ಯುವಕನನ್ನು ಪೊಲೀಸರು ಶನಿವಾರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಾಲಕಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಪ್ರೀತಿ ಪ್ರೇಮ ಎಂದು ಬಾಲಕಿಯನ್ನು ಪುಸಲಾಯಿಸಿದ್ದ ಆರೋಪಿ ಜುಲೈ 9ರಂದು ಹಾಸ್ಟೆಲ್ ನಿಂದ ಕರೆದುಕೊಂಡು ಹೋಗಿದ್ದ. ಬಾಲಕಿ ತಂದೆಯ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದಾಗ ಆಕೆಯ ಸೋದರ ಮಾವ ಬಾಲಕಿಯನ್ನು ಹಾಸ್ಟೆಲ್ ನಿಂದ ಕರೆದುಕೊಂಡು ಬರಲು ಹೋಗಿದ್ದಾರೆ. ಆಗ ಬಾಲಕಿ ಯುವಕನೊಂದಿಗೆ ಹೋಗಿರುವ ವಿಷಯ ಗೊತ್ತಾಗಿದೆ. ಮಾರನೇ ದಿನವೇ ಆಕೆಯ ತಂದೆ ನಿಧನರಾಗಿದ್ದಾರೆ. ತಂದೆಯ ಸಾವಿನ ವಿಷಯ ತಿಳಿದಿದ್ದರೂ ಬಾಲಕಿ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.