ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮದಲ್ಲಿ ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ರಾಜಸ್ಥಾನದ ಬಲೋತ್ರ ಜಿಲ್ಲೆಯ ಪಾದಲಿಕಲ್ಲು ಮೂಲದ ಉತ್ತಮ್ ಸಿಂಗ್(25) ವಾಸಸಂದ್ರ ಗ್ರಾಮದ ಮುನಾವರ್ ಸಿಂಗ್(25) ಮೃತಪಟ್ಟ ಯುವಕರು. ಐದಾರು ವರ್ಷಗಳ ಹಿಂದೆ ರಾಜಸ್ಥಾನದಿಂದ ಬಂದಿದ್ದ ಉತ್ತಮ್ ಸಿಂಗ್ ಮತ್ತು ಮುನಾವರ್ ಸಿಂಗ್ ದೊಡ್ಡಗಟ್ಟಿಗನಬ್ಬೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಸಂಬಂಧಿಕರೊಬ್ಬರು ನಡೆಸುತ್ತಿದ್ದ ಕೆಮಿಕಲ್ ಪ್ರಾಡಕ್ಟ್ ಗಳ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದರು.
ಗುರುವಾರ ಮಧ್ಯಾಹ್ನ ಇಬ್ಬರೂ ಮನೆಯ ಸಮೀಪದ ಕೃಷಿ ಹೊಂಡದಲ್ಲಿ ಸ್ನಾನ ಮಾಡಲು ಹೋಗಿದ್ದಾರೆ. ಈಜು ಬಾರದಿದ್ದರೂ ಉತ್ತಮ್ ಸಿಂಗ್ ನೀರಿಗೆ ಇಳಿದಿದ್ದು, ಮುಳುಗಿದ್ದಾರೆ. ಅವರ ರಕ್ಷಣೆಗೆ ಹೋದ ಮುನಾವರ್ ಸಿಂಗ್ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.